ಜೆಎನ್‌ಯು ಘರ್ಷಣೆ: ಐಶೆ ಘೋಷ್ ಸಹಿತ 9 ಮಂದಿ ವಿರುದ್ಧ ಆರೋಪ ದಾಖಲು
► ವಿದ್ಯಾರ್ಥಿಗಳ ಗುಂಪು ಘರ್ಷಣೆ ಪ್ರಕರಣದಲ್ಲಿ ಜೆಎನ್‌ಯು ಅಧ್ಯಕ್ಷೆ ವಿರುದ್ಧ ಕ್ರಿಮಿನಲ್ ಆರೋಪ ► ಮುಸುಕುಧಾರಿ ಗೂಂಡಾಗಳ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಹೆಸರಿಸದ ಪೊಲೀಸರು

ಹೊಸದಿಲ್ಲಿ,ಜ.10: ಜವಾಹರಲಾಲ್ ನೆಹರೂ ವಿವಿ ಆವರಣದಲ್ಲಿ ಕಳೆದ ವಾರ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು, ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 9 ಮಂದಿಯನ್ನು ಶಂಕಿತ ಆರೋಪಿಗಳೆಂದು ಗುರುತಿಸಿದ್ದಾರೆ.
ಪೊಲೀಸರು ಆರೋಪಿಗಳೆಂದು ಗುರುತಿಸಲ್ಪಟ್ಟವರಲ್ಲಿ ಬಹುತೇಕ ಮಂದಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗೆ ಸೇರಿದವರಾಗಿದ್ದಾರೆ. ಆದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ರವಿವಾರ ಸಂಜೆ ದಾಳಿ ನಡೆಸಿದ ಮುಸುಕುಧಾರಿ ಗೂಂಡಾಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲವೆಂದು ತಿಳಿದುಬಂದಿದೆ.
ರವಿವಾರದ ಮುಸುಕುಧಾರಿ ಗೂಂಡಾಗಳು ದಾಳಿ ನಡೆಸುವ ಮುನ್ನ ಹಾಸ್ಟೆಲ್ ಶುಲ್ಕ ಏರಿಕೆಗೆ ಕುರಿತಾಗಿ ವಿದ್ಯಾರ್ಥಿಗಳ ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ದಿಲ್ಲಿ ಪೊಲೀಸ್ ಅಧಿಕಾರಿಗಳು, ಚುಂಚುನ್ ಕುಮಾರ್, ಪಂಕಜ್ ಮಿಶ್ರಾ, ಐಶೆ ಘೋಷ್, ವಾಸ್ಕರ್ ವಿಜಯ್, ಸುಚೇತಾ ತಾಲೂಕ್‌ದಾರ್, ಪ್ರಿಯಾ ರಂಜನ್, ದೋಲನ್ ಸಾವಂತ್, ಯೋಗೇಂದ್ರ ಭಾರಧ್ವಾಜ್ ಹಾಗೂ ವಿಕಾಸ್ ಪಟೇಲ್‌ರನ್ನು ಆರೋಪಿಗಳನ್ನಾಗಿ ಪೊಲೀಸರು ಹೆಸರಿಸಿದ್ದಾರೆ.
ಐಶೆ ಘೋಷ್ ಎಡಪಂಥೀಯರ ನಿಯಂತ್ರಣದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿದ್ದರೆ, ಯೋಗೇಂದ್ರ ಭಾರಧ್ವಾಜ್ ಹಾಗೂ ವಿಕಾಸ್ ಪಟೇಲ್ ಅವರು ಸಂಘಪರಿವಾರದ ಜೊತೆ ನಂಟು ಹೊಂದಿರುವ ಎಬಿವಿಪಿಯ ಸದಸ್ಯರೆಂದು ಗುರುತಿಸಲಾಗಿದೆ.
ಹಾಸ್ಟೆಲ್ ಶುಲ್ಕ ಏರಿಕೆಗೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿದ್ದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ರವಿವಾರ ಮಧ್ಯಾಹ್ನ ಜೆಎನ್‌ಯು ವಿವಿಯ ಸರ್ವರ್ ಕೊಠಡಿಗೆ ನುಗ್ಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಗೆ ತಡೆಯೊಡ್ಡಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ರವಿವಾರ ಸಂಜೆ ಜೆಎನ್‌ಯು ಆವರಣದಲ್ಲಿ ಮುಸುಕುಧಾರಿ ಗೂಂಡಾಗಳಿಂದ ಹಲ್ಲೆಗೊಳಗಾದ ಘೋಷ್ ಅವರು, ಅಂದು ಮಧ್ಯಾಹ್ನ ವಿದ್ಯಾರ್ಥಿಗಳ ಗುಂಪೊಂದರ ಮೇಲೆ ಹಲ್ಲೆ ನಡೆಸಿದ ತಂಡವೊಂದರ ಭಾಗವಾಗಿದ್ದರು ಎಂದು ಪೊಲೀಸರು ಆಪಾದಿಸಿದ್ದಾರೆ.
ಐಶೆ ಘೋಷ್ ಅವರು ಮುಸುಕುಧಾರಿ ಗೂಂಡಾಗಳಿಂದ ಹಲ್ಲೆಗೊಳಗಾಗಿ ತೀವ್ರ ರಕ್ತಸ್ರಾವದೊಂದಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೇವಲ ನಾಲ್ಕು ನಿಮಿಷಗಳ ಅವಧಿಯಲ್ಲಿ ಅವರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದ್ದರು.
ಮೂರನೆ ಎಫ್‌ಐಆರ್‌ನಲ್ಲಿ, ರವಿವಾರ ಸಂಜೆ ಬಡಿಗೆ ಹಾಗೂ ಕಬ್ಬಿಣದ ರಾಡ್‌ಗಳೊಂದಿಗೆ ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ದಾಳಿ ನಡೆಸಿದ ಮುಸುಕುಧಾರಿ ಗೂಂಡಾಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಅದರಲ್ಲಿ ಯಾವುದೇ ಆರೋಪಿಗಳ ಹೆಸರನ್ನು ನಮೂದಿಸಿಲ್ಲ.
ಸಿಸಿಟಿವಿ ವಿಡಿಯೋ, ಅಸಲಿ ವಿಡಿಯೋ ರೆಕಾರ್ಡಿಂಗ್ ಗಳು ಹಾಗೂ ಸಾಕ್ಷಿಗಳ ಕೊರತೆಯಿಂದಾಗಿ ಆರೋಪಿಗಳನ್ನು ಗುರುತಿಸಲು ಕಷ್ಟಕರವಾಗುತ್ತಿದೆಯೆಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.
ಜೆಎನ್‌ಯು ಹಿಂಸಾಚಾರದ ಕುರಿತಾಗಿ ಪ್ರಸಾರವಾಗುತ್ತಿರುವ ವಿಡಿಯೋಗಳು ಹಾಗೂ ಛಾಯಾಚಿತ್ರಗಳ ಆಧಾರದಲ್ಲಿ ಆರೋಪಿಗಳೆಂದು ಗುರುತಿಸಲಾದ ವ್ಯಕ್ತಿಗಳಿಗೆ ತಾವು ನೋಟಿಸ್ ಜಾರಿಗೊಳಿಸಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವೊಂದರ ನೇತೃತ್ವ ವಹಿಸಿರುವ ಪೊಲೀಸ್ ಉಪ ಆಯುಕ್ತ ಜಾಯ್ ತಿರ್ಕೆ ತಿಳಿಸಿದ್ದಾರೆ.







