ಸಿಎಎ ಪ್ರತಿಭಟನಕಾರರಿಗೆ ಕಾಂಗ್ರೆಸ್ ಪೂರ್ಣ ಬೆಂಬಲ: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ,ಜ.10: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿತರಾಗಿರುವವರ ಬೆಂಬಲಕ್ಕೆ ತನ್ನ ಪಕ್ಷವಿರುವುದಾಗಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಶುಕ್ರವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಇಂದು ಬಿರು ಸಿನ ಪ್ರವಾಸ ಕೈಗೊಂಡಿರುವ ಪ್ರಿಯಾಂಕಾಗಾಂಧಿ ಅವರು, ರಾಜ್‌ಘಾಟ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ‘‘ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಪೊಲೀಸರು, ಡಿಸೆಂಬರ್ 19ರಂದು ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಅನ್ಯಾಯವೆಸಗಿದ್ದಾರೆ’’ ಎಂದು ಹೇಳಿದರು.
ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಕ್ಕಾಗಿ ಆಡಳಿತವು ತಮಗೆ ಬೆದರಿಕೆಯೊಡ್ಡುತ್ತಿದೆಯೆಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರು ತನ್ನಲ್ಲಿ ದೂರಿದ್ದಾರೆಂದು ಪ್ರಿಯಾಂಕಾ ಹೇಳಿದರು.
‘‘ ತಮ್ಮ ವಿರುದ್ಧ ಪೊಲೀಸರು ಗುರಿಯಿಟ್ಟಿದ್ದಾರೆಂದು ಜನರು ದೂರುತ್ತಿದ್ದಾರೆ. ಅವರಿಗೆ ತುಂಬಾ ಅನ್ಯಾಯವಾಗಿದೆ. ನಾನು ಅವರೊಂದಿಗಿದ್ದೇನೆ. ಅವರ ಬಗ್ಗೆ ಹೆಮ್ಮೆಯಾಗುತ್ತಿದೆ ಶಾಂತಿಯುತವಾಗಿ ಧ್ವನಿಯೆತ್ತಿದ್ದಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸುತ್ತಿದ್ದೇನೆ’’ ಎಂದವರು ಹೇಳಿದರು.
ಸಿಸಿಎ, ಎನ್‌ಸಿಆರ್ ವಿರುದ್ಧ ಪ್ರತಿಭಟಿಸುವ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಯುವಜನರನ್ನು ಪ್ರಚೋದಿಸುತ್ತಿದೆಯೆಂಬ ಬಿಜೆಪಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘‘ ಪ್ರತಿಭಟನೆ ನಡೆಸುತ್ತಿರುವ ದಿಲ್ಲಿ ವಿವಿ ವಿದ್ಯಾರ್ಥಿಗಳೇ ಹೊರತು ಗಲಭೆಕೋರರಲ್ಲ. ಒಮ್ಮೆ ಅವರನ್ನು ಭೇಟಿಯಾಗಿ, ಸಿಎಎ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾಗ ನಡೆದ ಸರಣಿ ಘಟನೆಗಳ ಬಗ್ಗೆ ಅವರಲ್ಲಿ ಕೇಳಿ’’ ಎಂದು ಪ್ರಿಯಾಂಕಾ ಬಿಜೆಪಿ ಸರಕಾರಕ್ಕೆ ಕಿವಿಮಾತು ಹೇಳಿದರು.
ವಿಶ್ವವಿದ್ಯಾನಿಲಯದ ಮಕ್ಕಳು, ದೇಶಕ್ಕಾಗಿ ಧ್ವನಿಯೆತ್ತಿರುವುದು ಹೆಮ್ಮೆಯ ವಿಷಯ ಎಂದು ಆಕೆ ಹೇಳಿದರು. ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿತರಾದ ಸಾಮಾಜಿಕ ಕಾರ್ಯಕರ್ತೆ, 18 ತಿಂಗಳ ಮಗುವಿನ ತಾಯಿ ಏಕತಾ ಶೇಖರ್ ಹಾಗೂ ಅವರ ಪತಿ ರವಿ ಅವರನ್ನು ಪ್ರಿಯಾಂಕಾ ಇಂದು ಭೇಟಿಯಾದರು.
‘‘ ಇತ್ತೀಚೆಗೆ ವಾರಣಾಸಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಲವಾರು ವಿದ್ಯಾರ್ಥಿಗಳು, ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳನ್ನು ಪೊಲೀಸರು ಬಂಧಿಸಿ , ಜೈಲಿನಲ್ಲಿರಿಸಿದ್ದಾರೆ. ತಂದೆತಾಯಿಗಳ ಬಂಧನದಿಂದಾಗಿ ಒಂದೂವರೆ ವರ್ಷದ ಮಗುವೊಂದು ಮನೆಯಲ್ಲಿ ಏಕಾಂಗಿಯಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಕ್ಕಾಗಿ, ದೊರೆತ ಕಠಿಣ ಶಿಕ್ಷೆ ಇದಾಗಿದೆಯೆಂದು ಅವರು ಹೇಳಿದ್ದಾರೆ.







