ಟ್ವೆಂಟಿ-20: ಲಂಕಾ ವಿರುದ್ಧ ಗೆಲುವಿನ ನಗೆ ಬೀರಿದ ಕೊಹ್ಲಿ ಪಡೆ
2-0 ಅಂತರದಲ್ಲಿ ಸರಣಿ ಗೆದ್ದ ಭಾರತ

ಪುಣೆ, ಜ.10: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತ 78 ರನ್ ಗಳ ಭರ್ಜರಿ ಜಯಗಳಿಸಿದ್ದು, ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು.
ಗೆಲುವಿಗೆ 202 ರನ್ ಗಳ ಕಠಿಣ ಸವಾಲು ಪಡೆದ ಶ್ರೀಲಂಕಾ 15.5 ಓವರ್ ಗಳಲ್ಲಿ 123 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ನವದೀಪ್ ಸೈನಿ 3, ಶರ್ದುಲ್ ಠಾಕೂರ್ ಹಾಗೂ ವಾಶಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರು. ಶ್ರೀಲಂಕಾ ಪರ ದನಂಜಯ ಡಿಸಿಲ್ವ ಅರ್ಧಶತಕ ಬಾರಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್(54) ಹಾಗೂ ಶಿಖರ್ ಧವನ್(52) ಅರ್ಧಶತಕಗಳ ಕೊಡುಗೆ ನೆರವಿನಿಂದ ಶ್ರೀಲಂಕಾ ತಂಡಕ್ಕೆ 202 ರನ್ ಗಳ ಗೆಲುವಿಗೆ ಕಠಿಣ ಸವಾಲು ನೀಡಿತ್ತು. ಉತ್ತಮ ಆರಂಭ ಪಡೆದ ಭಾರತ ಮಧ್ಯಮ ಕ್ರಮಾಂಕದ ಕುಸಿತದಿಂದ ಚೇತರಿಸಿಕೊಂಡು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು.
ರಾಹುಲ್(54 ರನ್, 36 ಎಸೆತ)ಹಾಗೂ ಧವನ್(52 ರನ್, 36 ಎಸೆತ)ಮೊದಲ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್(6), ಶ್ರೇಯಸ್ ಅಯ್ಯರ್(4), ನಾಯಕ ವಿರಾಟ್ ಕೊಹ್ಲಿ(26) ಹಾಗೂ ವಾಷಿಂಗ್ಟನ್ ಸುಂದರ್(0)ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ಮನೀಷ್ ಪಾಂಡೆ(ಔಟಾಗದೆ 31, 18 ಎಸೆತ)ಹಾಗೂ ಶಾರ್ದೂಲ್ ಠಾಕೂರ್(ಔಟಾಗದೆ 22, 8 ಎಸೆತ)7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 37 ರನ್ ಸೇರಿಸಿ ತಂಡದ ಮೊತ್ತವನ್ನು 201ಕ್ಕೆ ತಲುಪಿಸಿದರು. ಶ್ರೀಲಂಕಾದ ಪರ ಸಂಡಕನ್(3-35) ಯಶಸ್ವಿ ಪ್ರದರ್ಶನ ನೀಡಿದರು.







