ಎನ್ ಆರ್‌ಸಿ, ಸಿಎಎ ಜಾಗೃತಿ ಸಮಾವೇಶ ನಡೆಸಲು ಅನುಮತಿ ನೀಡಿಲ್ಲ -ದ.ಕ .ಪಿಯುಸಿಎಲ್ ಅಧ್ಯಕ್ಷ ಆರೋಪ
ಮಂಗಳೂರು : ಎನ್ ಆರ್‌ಸಿ ಮತ್ತು ಸಿಎಎ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡುವ ದೃಷ್ಟಿಯಿಂದ ಪಿಯುಸಿಎಲ್ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಜ.13ರಂದು ನಗರದಲ್ಲಿ ಹಮ್ಮಿಕೊಂಡಿರುವ ಮಾಹಿತಿ ಸಮಾವೇಶಕ್ಕೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಅನುಮತಿ ನೀಡಿಲ್ಲ ಎಂದು ಪಿಯುಸಿಎಲ್ ಆಧ್ಯಕ್ಷ ಈಶ್ವರ್ ರಾಜ್ ಆರೋಪಿಸಿದ್ದಾರೆ.
ನಗರದಲ್ಲಿ ಜನರಿಗೆ ಸಿಎಎ ಮತ್ತು ಎನ್ ಆರ್‌ಸಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆ ಈ ಬಗ್ಗೆ ಸೂಕ್ತವಾದ ಮತ್ತು ಸಮರ್ಪಕವಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ದೃಷ್ಟಿಯಿಂದ ಜ.13ರಂದು ನಗರದ ನೆಹರು ಮೈದಾನದಲ್ಲಿ ಪಿಯುಸಿಎಲ್ ಮತ್ತು ಎಸ್.ಕೆ.ಎಸ್.ಎಸ್.ಎಫ್ ಜೊತೆ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದಾಗ ಅವರು ನೆಹರು ಮೈದಾನದಿಂದ ಹೊರತಾಗಿ ಬೇರೆ ಕಡೆ ಕಾರ್ಯಕ್ರಮ ಮಾಡಲು ಸೂಚನೆ ನಿಡಿದ್ದಾರೆ. ಅದೇ ಪ್ರಕಾರ ನೆಹರು ಮೈದಾನದ ಕಾರ್ಯಕ್ರಮವನ್ನು ಬದಲಾಯಿಸಿ ನಗರದ ಬಲ್ಮಠ ಬಾಸೆಲ್ ಮಿಶನ್ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅಲ್ಲಿನ ಸಂಸ್ಥೆಯ ಮಾಲೀಕರ ಬಳಿ ಸ್ಥಳಾವಕಾಶವನ್ನು ಪಡೆದುಕೊಳ್ಳಲಾಯಿತು ಬಳಿಕ ಕಾರ್ಯಕ್ರಮ ನಡೆಸಲು ಮಂಗಳೂರು ಪೊಲೀಸ್ ಪೂರ್ವ ಠಾಣೆಯ ಇನ್ಸ್‌ಪೆಕ್ಟರ್‌ನ್ನು ಪಿಯುಸಿಎಲ್ ಅಧ್ಯಕ್ಷನಾಗಿ ನಾನು ಲಿಖಿತವಾಗಿ ಕೋರಿಕೆ ಸಲ್ಲಿಸಿದ್ದೇನೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಿಂದ ನಾನು ಸಮಾವೇಶ ನಡೆಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಸ್ವೀಕೃತಿ ಪತ್ರವನ್ನು ನೀಡಿಲ್ಲ. ಇದುವರೆಗೆ ಕಾರ್ಯಕ್ರಮ ನಡೆಸಲು ಅನುಮತಿ ಪತ್ರವನ್ನು ನೀಡಿಲ್ಲ ಎಂದು ಪಿಯುಸಿಎಲ್ ದ.ಕ ಜಿಲ್ಲಾ ಅಧ್ಯಕ್ಷ ಈಶ್ವರ್ ರಾಜ್ ತಿಳಿಸಿದ್ದಾರೆ.





