ಉಡುಪಿಯಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ
ಉಡುಪಿ, ಜ.10: ಜಿಲ್ಲೆಯ ಜನರಲ್ಲಿ ಈಜು ಸ್ಪರ್ಧೆಯ ಕುರಿತಂತೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಕೆಲ ಸಮಯದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಉಡುಪಿ ಸ್ವಿಮ್ಮಿಂಗ್ ಕ್ಲಬ್, ಇದೇ ಮೊದಲ ಬಾರಿ ಅಜ್ಜರಕಾಡಿನಲ್ಲಿರುವ ಈಜು ಕೊಳದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಕ್ಲಬ್‌ನ ಅಧ್ಯಕ್ಷ ರಾಮಕೃಷ್ಣ ರಾವ್ ತಿಳಿಸಿದ್ದಾರೆ.
1999ರಿಂದ 2012ರವರೆಗೆ ಜನಿಸಿದ ಬಾಲಕ-ಬಾಲಕಿಯರಿಗೆ ವಯೋಮಿತಿಯ ಆಧಾರದಲ್ಲಿ ಒಟ್ಟು ಎಂಟು ವಿಭಾಗಗಳಲ್ಲಿ ಅಲ್ಲದೇ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಒಟ್ಟು 90 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಎಲ್ಲಾ ವಿಭಾಗಗಳಲ್ಲೂ 50ಮೀ. ಮತ್ತು 25ಮೀ. ಫ್ರಿಸ್ಟೈಲ್,50ಮೀ. ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್‌ಸ್ಟ್ರೋಕ್, ಬಟರ್‌ಪ್ಲೈ ಹಾಗೂ ರಿಲೇ ಸ್ಪರ್ಧೆಗಳು ನಡೆಯಲಿವೆ. 2012 ಹಾಗೂ 2013ರ ನಂತರ ಜನಿಸಿದ ಪುಟಾಣಿಗಳಿಗೆ 25ಮೀ. ಬೋರ್ಡ್‌ಕಿಕ್ ಈಜು ನಡೆಯಲಿದೆ ಎಂದು ರಾವ್‌ನುಡಿದರು.
ವಿಜೇತರಿಗೆ ಹಾಗೂ ವೈಯಕ್ತಿಕ ಪ್ರಶಸ್ತಿ ಗೆಲ್ಲುವ ಈಜುಪಟುಗಳಿಗೆ ಟ್ರೋಫಿ ಮತ್ತು ಶೀಲ್ಡ್‌ಗಳನ್ನು ನೀಡಲಾಗುವುದು. ಉಡುಪಿ ಜಿಲ್ಲೆಯಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತಂತೆ ಸ್ಪರ್ಧಿಗಳು ಹಾಗೂ ಹೆತ್ತವರಲ್ಲಿ ಆಸಕ್ತಿ ಮೂಡಿಸಲು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದವರು ವಿವರಿಸಿದರು.
ಕ್ಲಬ್‌ನ ಕಾರ್ಯದರ್ಶಿ ಕೃಪಾ ಪ್ರಸಿಧ್ ಮಾತನಾಡಿ, ಜಿಲ್ಲೆಯ ಮಕ್ಕಳಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತಂತೆ ಇನ್ನೂ ಅರಿವು ಮೂಡಿಲ್ಲ. ಕೇವಲ ವ್ಯಾಯಾಮದ ದೃಷ್ಟಿಯಿಂದಷ್ಟೇ ಅವರು ಮಕ್ಕಳಿಗೆ ಈಜು ಕಲಿಸುತಿದ್ದಾರೆ ಎಂದು ನುಡಿದರು.
ಈ ನಿಟ್ಟಿನಲ್ಲಿ ಉಡುಪಿಯಲ್ಲೂ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳನ್ನು ಸಂಘಟಿಸಬೇಕಿದೆ. ಅಲ್ಲದೇ ಉಡುಪಿಯಲ್ಲೂ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳವೂ ನಿರ್ಮಾಣಗೊಳ್ಳಬೇಕಿದೆ ಎಂದು ರಾಮಕೃಷ್ಣ ರಾವ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಖಜಾಂಚಿ ಸರಿತಾ ಹಂಗಾರಕಟ್ಟೆ ಹಾಗೂ ಲೋಕೇಶ್ ಉಪಸ್ಥಿತರಿದ್ದರು.







