‘ಅರ್ಪಣಾ ಮನೋಭಾವದ ಶಿಕ್ಷಕರಿಂದ ಸಾಧಕ ವಿದ್ಯಾರ್ಥಿಗಳು’

ಉಡುಪಿ, ಜ.10:ಶಿಲ್ಪಿ, ಶಿಲೆಯಿಂದ ಸುಂದರ ಕಲಾಕೃತಿಗಳನ್ನು ನಿರ್ಮಿಸು ವಂತೆ ಅರ್ಪಣಾ ಮನೋಭಾವದ ಶಿಕ್ಷಕರಿಂದ ಸಾಧಕ ವಿದ್ಯಾರ್ಥಿಗಳು ಸೃಷ್ಠಿಯಾಗುತ್ತಾರೆ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶುಕ್ರವಾರ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆದ ‘ಪ್ರೈಡ್ ಆಪ್ ಪಿ.ಪಿ.ಸಿ’ ಹಾಗೂ ವಿದ್ಯಾರ್ಥಿ ವೇತನ ಸಮಾರಂಭದಲ್ಲಿ ಅನುಗ್ರಹ ಸಂದೇ ನೀಡಿ ಅವರು ಮಾತನಾಡುತಿದ್ದರು.
ಪೂರ್ಣಪ್ರಜ್ಞಾ ಕಾಲೇಜು ದಶಕಗಳಿಂದ ಈ ಕೆಲಸ ಮಾಡುತ್ತಾ ಬಂದಿದೆ. ಇಂದು ನಮ್ಮಾಂದಿಗಿರುವ ಗಣ್ಯ ಹಳೆವಿದ್ಯಾರ್ಥಿಗಳೇ ಇದಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ಅದಮಾರು ಮಠದ ಹಿರಿಯಶ್ರೀಗಳು ನುಡಿದರು.
ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಕ್ತನ ಸಾಧಕ ಹಳೆವಿದ್ಯಾರ್ಥಿಗಳಾದ ಕೆ. ಪ್ರಕಾಶ್ ಶೆಟ್ಟಿ ಬೆಂಗಳೂರು, ರಮೇಶ್ ರಾವ್ ಉಡುಪಿ, ಬಿ.ಜಿ. ಮೋಹನ್ ದಾಸ್ ಮಣಿಪಾಲ, ಜಯರಾಮ ಶೆಟ್ಟಿ ಶಿರೂರು, ಕೆ.ಉಷಾ ಪಿ. ಪೈ ಬೆಂಗಳೂರು, ಶ್ರೀಧರ ಕಾಮತ್ ಉಡುಪಿ ಹಾಗೂ ತೇಜಸ್ವಿ ಶಂಕರ್ ಇವರಿಗೆ ‘ಪ್ರೈಡ್ ಆಪ್ ಪಿಪಿಸಿ-2020’ ಗೌರವ ಫಲಕ ನೀಡಿ ಅಭಿನಂದಿಸಲಾಯಿತು.
ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಜಗದೀಶ್ ಶೆಟ್ಟಿ, ಡಾ. ಎ.ಪಿ. ಭಟ್ ಹಾಗೂ ಉಪನ್ಯಾಸಕಿ ಶಾಂತಿ ಲೂಯಿಸ್ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರತಿಭಾವಂತ 80 ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ. ಸಹಾಯಧನ ವಿತರಿಸಲಾಯಿತು.
ಕಾಲೇಜಿನ ಆಡಳಿತ ಸಮಿತಿಯ ಡಾ.ಜಿ.ಎಸ್. ಚಂದ್ರಶೇಖರ, ಪ್ರಾಂಶುಪಾಲಡಾ.ರಾವೇಂದ್ರ ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರು, ಕಾಲೇಜಿನ ಪ್ರಾಧ್ಯಾಪಕರು, ಹಳೆ ವಿದ್ಯಾರ್ಥಿ ಸದಸ್ಯರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ ಬಿ.ಎಂ. ಸೋಮಯಾಜಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಕರಬ ವಿದ್ಯಾರ್ಥಿವೇತನ ಪಟ್ಟಿ ವಾಚಿಸಿದರು. ವಿದ್ಯಾವಂತ ಆಚಾರ್ಯ ಸಮ್ಮಾನಿತ ರನ್ನು ಪರಿಚಯಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ಪ್ರಸನ್ನ ಅಡಿಗ ವಂದಿಸಿದರು.







