ತನಿಖೆಯ ದಿಕ್ಕು ತಪ್ಪಿಸುತ್ತಿರುವ ಕುಮಾರಸ್ವಾಮಿ: ಶಾಸಕ ಕಾಮತ್ ಆರೋಪ
ಮಂಗಳೂರು, ಜ.10: ಮಂಗಳೂರು ಹಿಂಸಾಚಾರ-ಗೋಲಿಬಾರ್‌ಗೆ ಸಂಬಂಧಪಟ್ಟಂತೆ ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವೀಡಿಯೊ ತನಿಖೆಯ ಹಾದಿ ತಪ್ಪಿಸುವ ಉದ್ದೇಶವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿರುವಾಗ ಇಂತಹ ವಿಡಿಯೋ ತೋರಿಸುವುದು ಅನುಭವಿ ರಾಜಕಾರಣಿ ಮಾಡುವ ಕೆಲಸವಲ್ಲ. ಇದು ಜನರನ್ನು ಇನ್ನಷ್ಟು ಅಸಮಾಧಾನಕ್ಕೆ ಗುರಿಪಡಿಸಿದಂತಾ ಗುತ್ತದೆ. ಹಲವು ವರ್ಷಗಳಿಂದ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರು ಸಮಾಜವನ್ನು ವಿಭಜಿಸುವ ಮೂಲಕ ರಾಜಕೀಯ ಲಾಭಕ್ಕೆ ಯತ್ನಿಸಿದ್ದಾರೆ. ಪೌರತ್ವ ಕಾನೂನು ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಲು ಈ ನಾಯಕರು ಮುಂದಾಗಬೇಕು ಎಂದು ಕಾಮತ್ ಹೇಳಿದ್ದಾರೆ.
ಈ ಹಿಂದೆ ಮುಲ್ಕಿಯಲ್ಲಿ ಸುಖಾನಂದ ಶೆಟ್ಟಿ ಹತ್ಯೆಯಾದಗಲೂ ಗೋಲಿಬಾರ್ ನಡೆದಿದೆ. ಆಗಲೂ ಇಬ್ಬರು ಹಿಂದೂ ಕಾರ್ಯ ಕರ್ತರು ಮೃತಪಟ್ಟಿದ್ದಾರೆ. ಇಂತಹ ಘಟನೆ ವೇಳೆ ಪೊಲೀಸರು ಕಾನೂನು ಸುವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಆದರೆ ಕುಮಾರಸ್ವಾಮಿ ಅವರು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಮತ ಪಡೆಯಲು ಕುಮಾರಸ್ವಾಮಿ ತಪ್ಪುದಾರಿ ಹಿಡಿಯುತ್ತಿದ್ದಾರೆ. ಅನುಭವಸ್ಥ ರಾಜಕಾರಣಿ ಕುಮಾರಸ್ವಾಮಿ ಈ ರೀತಿ ಮಾಡೋದು ಸರಿಯಲ್ಲ. ನಾಡಿದ್ದು ಮತ್ತೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಲಿದೆ, ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಹೀಗಿರುವಾಗ ಮತ್ತೆ ಈ ರೀತಿ ವಿಡಿಯೋ ಬಿಡುಗಡೆಮಾಡಿ ಆಕ್ರೋಶ ಹೆಚ್ಚಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ವೇದವ್ಯಾಸ ಕಾಮತ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.







