'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಪ್ರದರ್ಶನ: ಪೊಲೀಸರಿಗೆ ಸ್ಪಷ್ಟನೆ ನೀಡಿದ ವಿದ್ಯಾರ್ಥಿನಿ
ಮೈಸೂರು,ಜ.10: ಜೆಎನ್ ಯು ನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಪ್ರದರ್ಶಿಸಿದ್ದ ಯುವತಿ ಇಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ.
ತಮಿಳುನಾಡಿನ ಚೆನ್ನೈ ಮೂಲದ ನಳಿನಿ ಬಾಲಕುಮಾರ್ ಎಂಬ ಯುವತಿಯೇ ಈ ಘಟನೆಗೆ ಕಾರಣರಾದವರು.
ಮೈಸೂರು ವಿವಿ ಪತ್ರಿಕೋಧ್ಯಮ ವಿಭಾಗದ 2016 ರ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದರು. ಗುಜರಾತ್ ನಲ್ಲಿ ಫೋಟೊ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೆ ಮೈಸೂರಿಗೆ ಆಗಮಿಸಿ ರಾಮಕೃಷ್ಣನಗರದಲ್ಲಿ ವಾಸವಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
'ಫ್ರೀ ಕಾಶ್ಮೀರ್' ಪ್ಲೇ ಕಾರ್ಡ್ ಪ್ರದರ್ಶಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ನಳಿನಿ ಬಾಲಕುಮಾರ್, ಕಾಶ್ಮೀರದ ಜನತೆ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ಅಲ್ಲಿ ಸಹಜ ಸ್ಥಿತಿ ಮರುಕಳಿಸಬೇಕು ಎಂಬ ಅರ್ಥದಲ್ಲಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದೆ ಹೊರತು ಬೇರೆ ಉದ್ದೇಶದಿಂದಲ್ಲ. ನಾನು ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಿತಳಾಗಿ ಭಾಗವಹಿಸಿದ್ದು, ವಿವಿ ಸಂಘಟನೆಗಳಿಗು ಪ್ಲೇಕಾರ್ಡ್ ಪ್ರದರ್ಶನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ.





