ಜನಪ್ರತಿನಿಧಿಗಳಿಂದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ ಸಲ್ಲ: ಕಸಾಪ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್

ಬೆಂಗಳೂರು, ಜ.10: ಒಂದು ಇಲಾಖೆಯ ಮಂತ್ರಿಯೊಬ್ಬರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕೆಂದು ತೀರ್ಮಾನಿಸುವ ಹಂತಕ್ಕೆ ತಲುಪಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಕಸಾಪದಲ್ಲಿ ಕನ್ನಡ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬ ಹಾಗೂ ಅನಿಕೇತನ ಪ್ರಶಸ್ತಿ, ಕುವೆಂಪು ಯುವಕವಿ ಪ್ರಶಸ್ತಿ, ನಂ.ನಂಜಪ್ಪ ಚಿರಂತರ ಪ್ರಶಸ್ತಿ ಪ್ರದಾನ ಹಾಗೂ ಕುವೆಂಪು ಗೀತೆ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನರಿಂದ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಜನಪರವಿರಬೇಕು. ಆದರೆ, ಇಂದು ಪರಿಸ್ಥಿತಿ ಭಿನ್ನವಾಗಿದೆ. ಜನರ ನೋವು, ಸಂಕಷ್ಟಗಳನ್ನು ಅರ್ಥೈಸಿಕೊಂಡೇ ಸಾಹಿತ್ಯದಲ್ಲಿ ತೊಡಗುವ ಸಾಹಿತಿಗೆ ಒಂದು ಇಲಾಖೆಯ ಮಂತ್ರಿಯೊಬ್ಬರು ಈ ರೀತಿ ಅವಮಾನಿಸಿರುವುದು ಸಲ್ಲ. ಒಂದು ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷರು ಇಂತಹವರೇ ಆಗಲಿ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿದೆ. ಎಲ್ಲವನ್ನೂ ಜನಪ್ರತಿನಿಧಿಗಳೇ ನಿರ್ಧಾರ ಮಾಡುವುದಾದರೆ, ಇದರ ಅಗತ್ಯವಾದರೂ ಏನಿದೆ. ಹೀಗಾಗಿ, ಇಂದಿನ ಪರಿಸ್ಥಿತಿಯಲ್ಲಿ ನಾವು ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ವಾತಾವರಣ ನಿರ್ಮಾಣವಾಗಿದೆ. ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸಬೇಕಾದ ಅಧಿಕಾರದಲ್ಲಿರುವವರಿಂದು ಆಡಬಾರದ ಮಾತುಗಳನ್ನು ಆಡುತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ನಾವಿದ್ದೇವೆ ಎಂದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ವಿಶ್ವಮಾನವ ಸಂದೇಶ ನೀಡಿದ ಕುವೆಂಪುರನ್ನು ಇಂದಿನ ಕೆಲವು ಕಲುಷಿತ ಮನಸುಗಳು ಅಪಮಾನಿಸುತ್ತಿವೆ. ಆದರೆ, ಅವರನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದರೆ ಅಥವಾ ಅವರ ಕರಿಸಿದ್ದ ಕವಿತೆಯನ್ನು ಒಂದು ಬಾರಿ ಓದಲಿ. ಕುವೆಂಪು 30ರ ದಶಕದಲ್ಲಿ ಸರ್ವರೂ ಸಮಾನರು ಎಂದರೆ, ಅಂಬೇಡ್ಕರ್ 50 ರ ದಶಕದಲ್ಲಿ ಅದನ್ನೇ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಇವರಿಬ್ಬರ ಚಿಂತನೆಗಳಿಗೂ ಸಾಮ್ಯತೆಯಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಮುನ್ನುಗ್ಗುತ್ತಿದೆ. ಆಳುವವರು, ದೇಶ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕುವೆಂಪುರ ಅಧ್ಯಯನ ಬಹಳ ಮುಖ್ಯ ಎಂದ ಅವರು, ಕುವೆಂಪು ಇಂದು ಬದುಕಿದ್ದರೆ ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು ಮಾಡಿದವರ ಕಪಾಳಕ್ಕೆ ಹೊಡೆಯುತ್ತಿದ್ದರೇನೋ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಿ.ಎಸ್.ದ್ವಾರಕಾನಾಥ್‌ಗೆ ಅನಿಕೇತನ ಪ್ರಶಸ್ತಿ, ಎ.ಎಸ್.ನಟರಾಜ್‌ಗೆ ನಂ.ನಂಜಪ್ಪ ಚಿರಂತನ ಪ್ರಶಸ್ತಿ ಹಾಗೂ ಚಾಂದ್ ಪಾಷಾಗೆ ಯುವಕವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್, ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ಉಪಸ್ಥಿತರಿದ್ದರು.







