ಸರಕು ವಾಹನಗಳಲ್ಲಿ ಕಾರ್ಮಿಕರ ಪ್ರಯಾಣ: ಕೆಎಸ್ಸಾರ್ಟಿಸಿ, ಬಿಎಂಟಿಸಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜ.10: ಶಾಲಾ ಮಕ್ಕಳು, ಕಾರ್ಮಿಕರು, ಸಾಮಾನ್ಯ ಪ್ರಯಾಣಿಕರನ್ನು ಸರಕು ಸಾಗಣೆ ವಾಹನಗಳಲ್ಲಿ ಕೊಂಡೊಯ್ಯುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಪ್ರಮಾಣದಲ್ಲಿ ಸಾರ್ವಜನಿಕ ಪ್ರಯಾಣ ವ್ಯವಸ್ಥೆ ಕಲ್ಪಿಸುವ ವಿಚಾರ ಸಂಬಂಧ ಕೆಎಸ್ಸಾರ್ಟಿಸಿ ಮತ್ತು ಅಂಗ ಸಂಸ್ಥೆಗಳು ಹಾಗೂ ಬಿಎಂಟಿಸಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ನೋಟಿಸ್ ಜಾರಿಗೊಳಿಸಿತು.
ಪ್ರಕರಣವೇನು: ಸಾರ್ವಜನಿಕರಿಗೆ ಸುರಕ್ಷಿತ, ಸುಲಭ ಹಾಗೂ ಕೈಗೆಟಕುವ ದರದದಲ್ಲಿ ವಾಹನಗಳಲ್ಲಿ ಸಂಚರಿಸುವ ರಾಜ್ಯ ನೀತಿಯೊಂದನ್ನು ರೂಪಿಸಲು ರಸ್ತೆ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಮಕ್ಕಳ ಹಕ್ಕುಗಳು ಹಾಗೂ ಕೇಂದ್ರ ಟ್ರೇಡ್ ಯೂನಿಯನ್‌ಗಳ ನೆರವು ಪಡೆಯುವಂತೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಕೋರಿಕೆ.
ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳು, ಕಾರ್ಮಿಕರು, ಸಾಮಾನ್ಯ ಪ್ರಯಾಣಿಕರನ್ನು ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಇದರಿಂದ ರಾಜ್ಯದ ವಿವಿಧೆಡೆ ಸಾಕಷ್ಟು ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿ ಪ್ರಯಾಣಿಕರನ್ನು ಬೇಕಾಬಿಟ್ಟಿಯಾಗಿ ಕರೆದುಕೊಂಡು ಹೋಗುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ. ಅಂತೆಯೇ ಮೋಟಾರು ವಾಹನ ಕಾಯ್ದೆ 1988ರ ಉಲ್ಲಂಘನೆಯೂ ಹೌದು ಎಂದು ಅರ್ಜಿದಾರರು ದೂರಿದ್ದಾರೆ.







