ಸಂಸ್ಕೃತಿ-ವಿಜ್ಞಾನದ ಸಮಾಗಮದಿಂದ ಮಾನವ ಅಭಿವೃದ್ಧಿ: ಡಾ.ಹುಲಿಕಲ್ ನಟರಾಜ್
ಬಳ್ಳಾರಿ,ಜ.11: ಕಾಣದ ದೆವ್ವಗಳು ಈ ಭೂಮಿಯ ಮೇಲೆ ಇಲ್ಲವೇ ಇಲ್ಲ, ಭಯ ಹುಟ್ಟಿಸಿ ದುರ್ಬಲ ಮನಸ್ಸುಗಳನ್ನು ಖಾಯಿಲೆಗೆ ದೂಡುವುದು ವಿಕ್ಷಿಪ್ತ ಮನಸ್ಸುಗಳ ತಂತ್ರಗಳಾಗಿವೆ ಎಂದು ಪವಾಡ ಬಯಲು ತಜ್ಞ ಡಾ.ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ನಗರದಲ್ಲಿ ಹಂಪಿ ಉತ್ಸವ-2020 ಅಂಗವಾಗಿ ಕಡಲೆಕಾಳು ಗಣಪ ವೇದಿಕೆಯಲ್ಲಿ ನಡೆದ ಪವಾಡ ಬಯಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾರ್ಮೋನುಗಳ ವ್ಯತ್ಯಾಸಗಳಿಂದ ಮನುಷ್ಯ ವಿಚಿತ್ರವಾಗಿ ವರ್ತಿಸಬಲ್ಲ. ವಾಮಾಚಾರ, ಮಾಟ ಮಂತ್ರಗಳು ಮನುಷ್ಯನ ಮೇಲೆ ಪರಿಣಾಮ ಬೀರಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ಅಂತಹ ಹೀನ ಆಚರಣೆಗಳನ್ನು ಕೈಬಿಟ್ಟು ಮನಸ್ಸು, ಮನಸ್ಸುಗಳನ್ನು ಅರ್ಥೈಸುವ, ಪ್ರೀತಿ ಬೆಸೆಯುವ ಸಂಸ್ಕೃತಿ ಹರಡಬೇಕಾಗಿದೆ. ಸಂಸ್ಕೃತಿ ಮತ್ತು ವಿಜ್ಞಾನ ಸಮಾಗಮಗೊಂಡರೆ ಮಾನವ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಮಕ್ಕಳನ್ನು ಸೆಲ್ ಫೋನ್, ಚಾಟಿಂಗ್, ಕೇಬಲ್ ಟಿವಿ, ಸಿನೆಮಾ, ಕ್ರಿಕೆಟ್ ಈ ಐದು ‘ಸಿ’ ಗಳಿಂದ ದೂರವಿಟ್ಟು, ಕಬಡ್ಡಿ, ವಾಲಿಬಾಲ್, ಖೋ ಖೋದಂತಹ ಕ್ರೀಡೆಗಳಲ್ಲಿ ತೊಡಗಿಸಿ ಅದರಿಂದ ಅವರ ಸರ್ವತೋಮುಖ ವಿಕಾಸವಾಗುತ್ತದೆ. ವಿಚಾರಶಕ್ತಿ, ಭಾಗವಹಿಸುವಿಕೆ, ತನಿಖೆ, ಮಾಹಿತಿ ಸಂಗ್ರಹಣೆ ಹಾಗೂ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಬೇಕು ಎಂದು ಅವರು ಹೇಳಿದರು.
ನಿಂಬೆ ಹಣ್ಣು ಮಾಯ ಮಾಡುವುದು, ಜಾಲಿ ಮುಳ್ಳಿನ ಮೇಲೆ ಕುಳಿತುಕೊಳ್ಳುವುದು, ತಲೆ ಮೇಲೆ ಬೆಂಕಿ ಹಚ್ಚಿಕೊಂಡು ದೆವ್ವ ಎನ್ನುವುದು, ಮೊಳೆಯ ಮಿಡ್ ಬ್ರೇನ್ ಟ್ರೇನಿಂಗ್, ಸಮ್ಮೋಹಿನಿ ವಿದ್ಯೆ ಮತ್ತಿತರ ತಂತ್ರಗಳನ್ನು ಅನುಸರಿಸಿ ಮಹಿಳೆಯರು ಮತ್ತು ಮಕ್ಕಳನ್ನು ವಿಕೃತ ಕೃತ್ಯಗಳಿಗೆ ಬಳಸಿಕೊಳ್ಳುವ ರಹಸ್ಯಗಳನ್ನು ಅವರು ಅನಾವರಣಗೊಳಿಸಿದರು.
ರಾಸಾಯನಿಕಗಳನ್ನು ನಮಗರಿವಿಲ್ಲದಂತೆಯೇ ನಮ್ಮ ಮೇಲೆ ಪ್ರಯೋಗಿಸಿ, ದೇವರು ಮತ್ತು ಮನುಷ್ಯರ ನಡುವೆ ಇರುವ ಮಧ್ಯವರ್ತಿಗಳು ವ್ಯವಸ್ಥಿತವಾಗಿ ನಮ್ಮನ್ನು ಮಾನಸಿಕ ದುರ್ಬಲತೆಗೆ ತಳ್ಳುತ್ತಿದ್ದಾರೆ. ಭಯ ಹುಟ್ಟಿಸಿ, ಒತ್ತಡಕ್ಕೆ ಸಿಲುಕಿಸಿ ತಮ್ಮ ಧನದಾಹ ತೀರಿಸಿಕೊಳ್ಳುತ್ತಾರೆ ಎಂದು ಹುಲಿಕಲ್ ನಟರಾಜ್ ತಿಳಿಸಿದರು. ದೇವರು ಎಂದಿಗೂ ಮೋಸ ಮಾಡುವುದಿಲ್ಲ, ದೇವರ ಹೆಸರಿನಲ್ಲಿ ಇಂತಹ ಶಕ್ತಿಗಳು ತಮ್ಮ ಬದುಕು ಸಾಗಿಸಲು ಜನ್ಮಾಂತರ ರಹಸ್ಯ, ಪುನರ್ಜನ್ಮ, ಭಾನಾಮತಿ ಮೊದಲಾದ ಮೌಢ್ಯಗಳನ್ನು ಸಮಾಜದಲ್ಲಿ ಬಿತ್ತಿ, ನಿರಂತರವಾಗಿ ವಂಚಿಸುವ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಕೃತ್ಯಗಳು ಎಲ್ಲಿಯೇ ಕಂಡು ಬಂದರೂ ನಮ್ಮ ತಂಡಕ್ಕೆ ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದರು.
ಹುಲಿಕಲ್ ನಟರಾಜ ಹೆಸರಿನಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸಲಾಗಿದ್ದು, ದಿನನಿತ್ಯ ಒಂದು ವೈಜ್ಞಾನಿಕ ಕಾರ್ಯಕ್ರಮ ನೀಡಲಾಗುತ್ತಿದೆ. ಆ ಮೂಲಕ ಇಲ್ಲವೇ ನೇರವಾಗಿ 9916100511 ಮೊಬೈಲ್ ಮೂಲಕವೂ ನಮ್ಮನ್ನು ಸಂಪರ್ಕಿಸಿದರೆ ಅದರ ಹಿಂದಿನ ರಹಸ್ಯ ಬಯಲು ಮಾಡುತ್ತೇನೆ ಎಂದು ಹುಲಿಕಲ್ ನಟರಾಜ್ ಹೇಳಿದರು.
ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೀರಣ್ಣ ಬಿರಾದಾರ, ಸಿರಗುಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ ಭಜಂತ್ರಿ, ಸಿರಗುಪ್ಪ ತಹಶೀಲ್ದಾರ್ ಎಸ್.ಬಿ.ಕೂಡ್ಲಗಿ, ತಾಪಂ ಇಓ ಶಿವಪ್ಪಸುಬೇದಾರ, ವಿವಿಧ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







