ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ: ಕನಿಷ್ಠ ಎಂಟು ಬಲಿ

ಮುಂಬೈ, ಜ.11: ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಬೊಯ್ಸಾರ್‌ನಲ್ಲಿ ನಿರ್ಮಾಣಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಶನಿವಾರ ಸಂಜೆ ನಡೆದ ಭಾರೀ ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಕೊಳ್ವಾಡೆ ಗ್ರಾಮದಲ್ಲಿರುವ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿರುವ ರಾಸಾಯನಿಕ ಸ್ಥಾವರವು ಆ್ಯಂಕ್‌ಫಾರ್ಮಾ ಔಷಧಿ ತಯಾರಿಕಾ ಸಂಸ್ಥೆಗೆ ಸೇರಿದ್ದಾಗಿದೆಯೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಂಜೆ ಸುಮಾರು 7:20ರ ವೇಳೆಗೆ ಸ್ಥಾವರದಲ್ಲಿ ಕೆಲವು ರಾಸಾಯನಿಕಗಳನ್ನು ಪರೀಕ್ಷಿಸುತ್ತಿದ್ದಾಗ ಹಠಾತ್ ಸ್ಫೋಟ ಸಂಭವಿಸಿತೆಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆ ಎಷ್ಟು ಅಗಾಧವಾಗಿತ್ತೆಂದರೆ, ಅದು 15 ಕಿ.ಮೀ. ವಿಸ್ತೀರ್ಣದವರೆಗೆ ಕೇಳಿಸಿತ್ತು ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿನ ಕೆಲವು ಮನೆಗಳ ಕಿಟಕಿಗಾಜುಗಳು ಒಡೆದುಹೋಗಿವೆಯೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಕಾರ್ಖಾನೆಯ ಅವಶೇಷಗಳಿಂದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆಯೆಂದು ಅವರು ಹೇಳಿದ್ದಾರೆ.





