ನಿರಾಶ್ರಿತರಿಗೆ ಪೌರತ್ವ ನೀಡಿದರೆ ಉದ್ಯೋಗ ಎಲ್ಲಿ ನೀಡುತ್ತೀರಿ: ಪ್ರೊ.ಅರವಿಂದ ಮಾಲಗತ್ತಿ ಪ್ರಶ್ನೆ

ಮೈಸೂರು,ಜ.11: ಸಂವಿಧಾನದ ಪ್ರಸ್ತಾಪವನ್ನು ಪಕ್ಕಕ್ಕೆ ಸರಿಸಿ ಪೌರತ್ವ ಕಾಯಿದೆ ತರಲಾಗಿದೆ. ಮೂರು ದೇಶಗಳಲ್ಲಿನ ನಿರಾಶ್ರಿತರಿಗೆ ಇಲ್ಲಿನ ಪೌರತ್ವ ನೀಡಿದರೆ ಅವರಿಗೆ ಉದ್ಯೋಗ ಎಲ್ಲಿ ನೀಡುತ್ತೀರಿ? ಇಲ್ಲಿರುವವರಿಗೆ ಉದ್ಯೋಗವಿಲ್ಲ ಬೇರೆಯವರ ಕರೆದುಕೊಂಡು ಬಂದರೆ ಉದ್ಯೋಗ ಹೇಗೆ ಕಲ್ಪಿಸುತ್ತೀರಿ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ನೇರವಾಗಿ ಪ್ರಶ್ನಿಸಿದರು.
ನಗರದ ಮಾನವಿಕ ಸಭಾಂಗಣದಲ್ಲಿ ಶನಿವಾರ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ 'ಬೇಕಿರುವುದು ಇಇಇ (ಶಿಕ್ಷಣ, ಉದ್ಯೋಗ, ಆರ್ಥಿಕತೆ)' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ದೇಶದಲ್ಲಿ ಧರ್ಮ ಮಂದಾಗುತ್ತದೋ ಆ ದೇಶ ಹಿಂದುಳಿಯುತ್ತದೆ. ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವ ಹಿನ್ನೆಡೆ ಅನುಭವಿಸುತ್ತದೆ ಎನ್ನುವುದನ್ನು ಆಡಳಿತಗಾರರು ಅರಿಯಬೇಕಿದೆ ಎಂದು ಸೂಚ್ಯವಾಗಿ ನುಡಿದರು.
ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರ ತೋರಿಸಲು ಮುಂದಾದರೆ ಸಾಮಾನ್ಯ ಜನತೆ ಎದ್ದು ನಿಲ್ಲುತ್ತಾರೆ. ಈಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರುದ್ಧ ಜನ ಪ್ರತಿಭಟನೆಗಿಳಿದಿದ್ದಾರೆ. ಜನರ ದ್ವನಿ ಖಚಿತತೆಯು ನನ್ನ ದೇಶದ ಸಂವಿಧಾನ ಸುಭದ್ರ ಎಂಬುದನ್ನು ಸಾರುತ್ತಿದೆ. ಈಗ ಅಂಬೇಡ್ಕರ್ ಎಲ್ಲರ ನಾಲಿಗೆ ಮೇಲೆ ಹರಿದಾಡುತ್ತಿದ್ದಾರೆ. ಸನಾತನ ವಿಚಾರ ಮುಂದಿಟ್ಟುಕೊಂಡು ಜನತೆಯನ್ನ ಭಾವನಾತ್ಮಕ ಬಡಿದೆಬ್ಬಿಸಿ ಹರಿದು ಮುಂದೆ ಹೋಗುವವರಿಗೆ ಜನರು ತಡೆಗೋಡೆಯೊಡ್ಡಿದ್ದಾರೆ ಎಂದರು.
ಸಿಎಎನಿಂದ ಅಂತರ ಜಾತಿ ವಿವಾಹಕ್ಕೆ ಪೆಟ್ಟು ಬೀಳಲಿದೆ. 13 ರಾಜ್ಯದ ಸರಕಾರ ಜಾರಿಗೊಳಿಸಲ್ಲ ಎಂದಿರುವುದರಿಂದ ಕೇಂದ್ರ ಸರಕಾರ ಮರು ಚಿಂತನೆಗೆ ಮನಸ್ಸು ಮಾಡಬೇಕು. ಹಿಂದೆ ಬಡವರ ಜೇಬು ಖಾಲಿಯಾಗುತ್ತದೆ ಅಂತ ಸಾರಾಯಿ ಅಂಗಡಿ ಬಂದ್ ಮಾಡುವಂತೆ ಈಗ ಇಂಟರ್ನೆಟ್ ಬಂದ್ ಮಾಡಲಾಗುತ್ತಿದೆ. ಇಂಟರ್ ನೆಟ್ ಸಾರಾಯಿ ಅಂಗಡಿಯಂತಾಗಿದ್ದು, ಸೋಷಿಯಲ್ ಮೀಡಿಯಾ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲಿಗೆಯಾಗಿರುವುದು ಸಮಾಧಾನಕರ ಎಂದು ಮಾಲಗತ್ತಿ ತಿಳಿಸಿದರು.
ವಿಶ್ವವಿದ್ಯಾನಿಲಯಗಳು ದೇಶದ ಮಿದುಳು ಇದ್ದಹಾಗೆ. ಪರೋಕ್ಷವಾಗಿ ಹತ್ತಿಕ್ಕಲು ಮುಂದಾದರೆ ದೇಶದ ಬೌದ್ದಿಕ ಮಿದುಳನ್ನ ತೆಗೆದು ಹಾಕಿದಂತಾಗಲಿದೆ. ವಿವಿಗಳನ್ನು ಬಲಹೀನವನ್ನಾಗಿ ಮಾಡಬಾರದು. ಇಡೀ ಜೀವನ ಕಾರ್ಡ್‍ಮಯ ಆಗಬಾರದು. ಸಂಬಂಧಕ್ಕೆ ಬೆಲೆ ಕೊಡಬೇಕು. ಸಿಎಎನಿಂದ ಜನ ಹಣ್ಣಾಗುತ್ತಿದ್ದಾರೆ. ಬದುಕು ಅಡಕತ್ತರಿಯಲ್ಲಿ ಸಿಲುಕಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್, ಅಂಕಣಕಾರ ಡಾ.ಕೆ.ಸಿ.ರಘು, ಪತ್ರಕರ್ತ ಟಿ. ಗುರುರಾಜ್, ಐಎಎಸ್ ಅಕಾಡೆಮಿಯ ತರಬೇತುದಾರ ಡಾ. ಶಿವಕುಮಾರ್ ಮತ್ತಿತರರು ಹಾಜರಿದ್ದರು. ಭೂವಿಜ್ಞಾನ ವಿಭಾಗದ ಪ್ರದೀಪ್ ರಾಜ್ ವಿಷಯ ಮಂಡಿಸಿದರು. ಬಿವಿಎಸ್ ಜಿಲ್ಲಾ ಸಂಯೋಜಕ ಎಚ್.ಎಸ್. ಗಣೇಶ್‍ಮೂರ್ತಿ ಹಾಜರಿದ್ದರು.
ಮೈವಿವಿ ಆಡಳಿತ ಸಿಂಡಿಕೇಟ್ ಹೇಳಿದಂತೆ ಕೇಳಬಾರದು: ಎನ್. ಮಹೇಶ್
ಮೈಸೂರು ವಿವಿಯಲ್ಲಿ ನಡೆದ ಅಚಾತುರ್ಯ ಘಟನೆ ಮುಗಿದ ಅಧ್ಯಾಯ. ಹಾಗಂತ ಮೈವಿವಿ ಕುಲಪತಿ ಮತ್ತು ಕುಲಸಚಿವರು ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಮುಂದಾಗಬಾರದು. ಸಿಂಡಿಕೇಟ್ ಸದಸ್ಯರು ಹೇಳಿದಂತೆ ಕೇಳುವುದಾದರೆ ಇವರು ಯಾಕೆ? ಎಂದು ಶಾಸಕ ಎನ್. ಮಹೇಶ್ ಕಿಡಿಕಾರಿದರು.
ಮಾನಸಗಂಗೋತ್ರಿಯ ಎಲ್ಲಾ ಮರಗಳ ಮೇಲೆ ಯಾರೂ ಮಾತನಾಡಬಾರದು ಎಂಬ ಬೋರ್ಡ್ ನೇತುಹಾಕಿಬಿಡಿ. 'ಸಿಎಎ ಅಲ್ಲ' ಎಂಬ ವಾಕ್ಯಕ್ಕೆ ಪೇಪರ್ ಅಂಟಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಹೇಳಿದರು.
ಭಾರತದಲ್ಲಿ ವಾಸಿಸುವುದಿಲ್ಲ ಎಂದು 2 ಕೋಟಿ ಜನ ಹೊರ ದೇಶಗಳಿಗೆ ಹೋಗಿ ವಾಸಿಸುತ್ತಿದ್ದಾರೆ. ಹೊರಗಿನಿಂದ ಇಲ್ಲಿಗೆ ಬರುವವರು ಕೇವಲ 51 ಸಾವಿರ ಜನರು ಮಾತ್ರ. ಇಲ್ಲಿನ ಕೂಲಿ ಕಾರ್ಮಿಕರು ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ಕಳುಹಿಸುತ್ತಿರುವ ಹಣ 80 ಬಿಲಿಯನ್ ಡಾಲರ್. ಹೀಗಿರುವಾಗ ಕೇಂದ್ರ ಸರಕಾರ ಪೌರತ್ವ ಕಾಯಿದೆ ಜಾರಿಗೆ ತರುತ್ತಿರುವುದರಲ್ಲಿ ಅರ್ಥವಿದೆಯೇ?
- ಡಾ.ಕೆ.ಸಿ.ರಘು, ಅಂಕಣಕಾರ







