ಕಾಶ್ಮೀರದಲ್ಲೂ ಮುಕ್ತ ವಾತಾವರಣ ನಿರ್ಮಾಣವಾಗಬೇಕು: 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಪ್ರದರ್ಶಿಸಿದ್ದ ನಳಿನಿ ಸ್ಪಷ್ಟನೆ

ಮೈಸೂರು,ಜ.11: ಇತರೆ ರಾಜ್ಯಗಳ ಮಾದರಿಯಲ್ಲಿ ಜಮ್ಮು ಕಾಶ್ಮೀರದಲ್ಲೂ ಕೂಡ ಮುಕ್ತ ವಾತಾವರಣ ನಿರ್ಮಾಣ ಆಗಬೇಕು ಎಂಬ ಒಂದೇ ಉದ್ದೇಶದಿಂದ 'ಪ್ರೀ ಕಾಶ್ಮೀರ್' ಭಿತ್ತಿ ಪತ್ರ ಹಿಡಿಯಲಾಗಿತ್ತು ಎಂದು ಬಿ.ನಳಿನಿ ಸ್ಪಷ್ಟಪಡಿಸಿದರು.
ನಗರದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ 6 ಗಂಟೆಗಳ ಪೊಲೀಸರ ವಿಚಾರಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ತನಿಖಾಧಿಕಾರಿಗಳು ನನ್ನ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ತನಿಖಾ ಹಂತದಲ್ಲಿರುವ ಕಾರಣ ವಿಚಾರಣೆಯ ವಿಷಯವನ್ನು ಹೇಳಲು ಸಾಧ್ಯವಿಲ್ಲ, ನಾನು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ, ಇತರೆ ರಾಜ್ಯದ ಜನ ಫ್ರೀಯಾಗಿ ಓಡಾಡುವ ಹಾಗೆ ಜಮ್ಮು ಕಾಶ್ಮೀರದಲ್ಲೂ ವಾತಾವರಣ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಈ ಫಲಕವನ್ನು ಪ್ರದರ್ಶಿಸಿದ್ದೆ ಎಂದು ಹೇಳಿದರು.
ಜ.8ರ ಬುಧವಾರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಹಿಡಿದಿದ್ದ ವಿದ್ಯಾರ್ಥಿನಿಯ ವಿಚಾರಣೆಯನ್ನು ಡಿಸಿಪಿ ಮುತ್ತುರಾಜ್ ಮತ್ರು ಎಸಿಪಿ ಶಿವಶಂಕರ್ ಪ್ರತ್ಯೇಕವಾಗಿ ನಡೆಸಿದರು.
ಮತ್ತೊಂದೆಡೆ ಯುವತಿ ನಳಿನಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು 'ಫ್ರೀ ಕಾಶ್ಮೀರ್' ಎಂದು ನಾನು ದೇಶದ್ರೋಹದ ದೃಷ್ಟಿಯಲ್ಲಿ ಭಿತ್ತಿ ಪತ್ರ ಪ್ರದರ್ಶನ ಮಾಡಿರಲಿಲ್ಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಐದು ತಿಂಗಳಿನಿಂದ ಇಂಟರನೆಟ್ ಸೇವೆ ಸೇರಿದಂತೆ ಅನೇಕ ರೀತಿಯ ದಿನ ಬಳಕೆಗಳನ್ನು ನಿಷೇಧಿಸಲಾಗಿದೆ. ಹಾಗಾಗಿ ಅದೆಲ್ಲಾ ಮುಕ್ತಗೊಳಿಸಲಿ ಎಂಬ ಉದ್ದೇಶದಿಂದ 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಪ್ರದರ್ಶನ ಮಾಡಿದೆ. ಇದರಿಂದ ಯಾರಿಗಾದರೂ ಬೇಸರ ಆಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದ್ದಾರೆ.
ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೂ ಈ ಘಟನೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆ ಸಂಬಂಧ, ಬಿ.ನಳಿನಿ ಅವರಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.
ಅರ್ಜಿದಾರರಾದ ನಳಿನಿ ಅವರನ್ನು ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದರೆ ಒಂದು ಲಕ್ಷ ರೂ. ವೈಯುಕ್ತಿಕ ಮುಚ್ಚಳಿಕೆ ಹಾಗೂ ಒಬ್ಬರು ನೀಡುವ ಜಾಮೀನನ್ನು ಪಡೆದು ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರರು ತನಿಖೆಯಲ್ಲಿ ತನಿಖಾಧಿಕಾರಿಗಳಿಗೆ ಸಹಕಾರ ನೀಡಬೇಕು. ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಅರ್ಜಿದಾರರು ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.







