ಯುಎಇಯಲ್ಲಿ ಭಾರೀ ಮಳೆಗೆ ಮಹಿಳೆ ಬಲಿ: ಪ್ರವಾಹದಲ್ಲಿ ಕೊಚ್ಚಿ ಹೋದ ಕಾರ್ಮಿಕ

Photo: khaleejtimes.com
ಅಬುಧಾಬಿ, ಜ.12: ಕಳೆದ ಎರಡು ದಿನಗಳಿಂದ ಯುಎಇ ರಾಸ್ ಅಲ್ ಖೈಮಾನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಡೆಯೊಂದು ಕುಸಿದು ಬಿದ್ದ ಪರಿಣಾಮವಾಗಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆ. ಏಶ್ಯದ ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾರೆ .
ಅಲ್ ಫಹ್ಲೀಮ್ ಪ್ರದೇಶದಲ್ಲಿ ಭಾರಿ ಮಳೆಯಿಂದ ಮನೆಯ ಗೋಡೆ ಕುಸಿದು ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೈ ಮೇಲೆ ಬಿತ್ತು. ಇದರಿಂದಾಗಿ ಗಂಭೀರ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ವಾಡಿ ಶಾಮ್ ನಲ್ಲಿ ಪ್ರವಾಹದಿಂದಾಗಿ ಏಶ್ಯದ ಕಾರ್ಮಿಕರೊಬ್ಬರು ನಾಪತ್ತೆಯಾಗಿದ್ದಾರೆ ಮತ್ತು ಆತನನ್ನು ಹುಡುಕಲು ಶೋಧ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಳೆದ ಎರಡು ದಿನಗಳಿಂದ ಹವಾಮಾನ ಪರಿಸ್ಥಿತಿಗಳ ಬಗ್ಗೆ ಆರ್ಎಕೆ ಪೊಲೀಸರು ಅರೇಬಿಕ್, ಇಂಗ್ಲಿಷ್ ಮತ್ತು ಉರ್ದು ಸೇರಿದಂತೆ 16 ಭಾಷೆಗಳಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಮಳೆಯಿಂದಾಗಿ, ರಸ್ತೆಯಲ್ಲಿ ನೆರೆ ನೀರು ಹರಿಯುತ್ತಿದ್ದು, ಅಲ್ ಶುಹಾದಾ ರಸ್ತೆ, ಮತ್ತು ಜೆಬೆಲ್ ಜೈಸ್ಗೆ ಹೋಗುವ ರಸ್ತೆಗಳು ಮತ್ತು ಸಕ್ರ್ ಪಾರ್ಕ್ಗೆ ಹತ್ತಿರವಿರುವ ಅಲ್ ಖರಣ್ ಸೇತುವೆಯ ಮೂಲಕ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.
ಅಲ್ ಫಿಲಾಯಾ ವಸತಿ ಪ್ರದೇಶ ಮತ್ತು ಅಲ್ ಫಹ್ಲೀನ್ ಪ್ರದೇಶದ ವಾಡಿ ನಾಕ್ಬ್ ರಸ್ತೆಗಳನ್ನು ಭಾಗಶಃ ಮುಚ್ಚಲಾಗಿದೆ.







