ಜೆಎನ್ ಯು ಹಿಂಸಾಚಾರ: ಪೊಲೀಸರು ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಅಕ್ಷತ್ ಅವಸ್ಥಿ
ಕುಟುಕು ಕಾರ್ಯಾಚರಣೆಯಲ್ಲಿ ತಾನು ಎಬಿವಿಪಿ ಕಾರ್ಯಕರ್ತ ಎಂದಿದ್ದ ವಿದ್ಯಾರ್ಥಿ

ಹೊಸದಿಲ್ಲಿ: indiatoday.in ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಜೆಎನ್‍ಯು ವಿದ್ಯಾರ್ಥಿ ಅಕ್ಷತ್ ಅವಸ್ಥಿ ಎಂಬಾತ ತಾನು ವಿವಿಯಲ್ಲಿ ನಡೆದ ದಾಳಿಯಲ್ಲಿ ಶಾಮೀಲಾಗಿದ್ದನ್ನು ಒಪ್ಪಿಕೊಂಡಿದ್ದು, ಆತ ಹಾಗೂ ಇನ್ನೊಬ್ಬ ವಿದ್ಯಾರ್ಥಿ ರೋಹಿತ್ ಶಾಗೆ ತನಿಖೆಗೆ ಹಾಜರಾಗುವಂತೆ ದಿಲ್ಲಿ ಪೊಲೀಸರು ಸಮನ್ಸ್ ನೀಡಿದ್ದಾರೆ. ಆದರೆ ಅವಸ್ಥಿ ತನಿಖೆ ಎದುರಿಸಲು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಮೊದಲನೇ ವರ್ಷದ ಫ್ರೆಂಚ್ ಪದವಿ ವಿದ್ಯಾರ್ಥಿಯಾಗಿರುವ ಅವಸ್ಥಿ, indiatoday.in ಕುಟುಕು ಕಾರ್ಯಾಚರಣೆಯಲ್ಲಿ ತಾನು ಎಬಿವಿಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದನಲ್ಲದೆ, ದಾಳಿಯನ್ನು ತಾನು ಮುನ್ನಡೆಸಿದ್ದಾಗಿಯೂ ಹೇಳಿಕೊಂಡಿದ್ದ. ಇನ್ನೊಬ್ಬ ವಿದ್ಯಾರ್ಥಿ ರೋಹಿತ್ ಶಾ ಕೂಡ ತನ್ನ ಹೇಳಿಕೆಯಲ್ಲಿ ಜೆಎನ್‍ಯುವಿನ 20 ಕಾರ್ಯಕರ್ತರು ದಾಳಿಯಲ್ಲಿ ಶಾಮೀಲಾಗಿದ್ದರು ಎಂದು ತಿಳಿಸಿದ್ದ.
ರವಿವಾರ ದಿಲ್ಲಿ ಪೊಲೀಸರು ಪ್ರಕರಣ ಸಂಬಂಧ ಇನ್ನೂ ಏಳು ಮಂದಿ ಆರೋಪಿಗಳನ್ನು ಗುರುತಿಸಿದ್ದಾರೆ. ವಾಟ್ಸ್ಯಾಪ್ ಗ್ರೂಪ್ ಚಾಟ್ ಗಳು ಹಾಗೂ ಹಲವಾರು ವೀಡಿಯೋಗಳು ಹಾಗೂ ಫೋಟೋಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಲಾಗಿದೆ.
ಜೆಎನ್‍ಯು ಹಾಸ್ಟೆಲ್ ವಾರ್ಡನ್, ಐವರು ವಿದ್ಯಾರ್ಥಿಗಳು ಹಾಗೂ 13 ಭದ್ರತಾ ಸಿಬ್ಬಂದಿಗಳ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ.





