ಧರ್ಮಾಧಾರಿತವಾಗಿ ನಾಗರಿಕತ್ವ ನೀಡುವುದು ಸಂವಿಧಾನ ವಿರೋಧಿ: ಚಿಂತಕ ಶಿವಸುಂದರ್

ಚಿಕ್ಕಮಗಳೂರು, ಜ.12: ಧರ್ಮಾಧಾರಿತವಾದ ನಾಗರಿಕತ್ವ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಈ ಹಿಂದೆ ಸಂವಿಧಾನ ರಚನಾ ಸಮಿತಿಯಲ್ಲೇ ತೀರ್ಮಾನವಾಗಿದೆ. ಕೇಂದ್ರ ಸರಕಾರಕ್ಕೆ ಇದು ತಿಳಿದಿದ್ದರೂ ಸಂವಿಧಾನದ ವಿರುದ್ಧವಾಗಿ ಧರ್ಮಾಧಾರಿತವಾಗಿಯೇ ನಾಗರಿಕ ಪೌರತ್ವ ಕಾಯ್ದೆ (ಸಿಎಎ)ಯನ್ನು ಜಾರಿಗೆ ತರಲು ಮುಂದಾಗಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ದ್ರೋಹವಾಗಿದೆ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಕಿಂಚಿತ್ ಗೌರವ ಇಲ್ಲ ಎಂಬುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ ಎಂದು ಚಿಂತಕ ಹಾಗೂ ಅಂಕಣಕಾರ ಶಿವಸುಂದರ್ ಹೇಳಿದ್ದಾರೆ.
ನಗರದ ಸಹರ ಶಾದಿಮಹಲ್‍ನಲ್ಲಿ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆ ರವಿವಾರ ಏರ್ಪಡಿಸಿದ್ದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿಸುವವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ನಿರ್ಬಂಧ ಹೇರಲಾಗುತ್ತಿದೆ. ಆದರೆ, ಪರ ಇರುವವರಿಗೆ ಬೀದಿಬೀದಿಯಲ್ಲಿ ಪ್ರಚಾರ ಮಾಡಲು ಅವಕಾಶ ನೀಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದ್ದು, ಭಿನ್ನಮತ ವ್ಯಕ್ತಪಡಿಸಿದವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಬಲಿಪಶುಗಳಾದವರನ್ನೇ ಅಪರಾಧಿಗಳನ್ನಾಗಿಸಲಾಗುತ್ತಿದೆ. ಇದು ಹಿಟ್ಲರ್ ನ ಪ್ಯಾಸಿಸ್ಟ್ ಧೋರಣೆಯಾಗಿದ್ದು, ಕೇಂದ್ರ ಬಿಜೆಪಿ ಸರಕಾರ ಹಿಟ್ಲರ್ ನನ್ನು ಅನುಸರಿಸಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂದರು.
ಪ್ರಸಕ್ತ ದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವವರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವತ್ತೂ ಭಾಗಿಯಾದವರಲ್ಲ. ಒಬ್ಬನೇ ಒಬ್ಬ ಆರೆಸ್ಸೆಸ್ ಮುಖಂಡನ ಹೆಸರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿರುವವರ ಪಟ್ಟಿಯಲ್ಲಿಲ್ಲ. ಆದರೆ, ಹಿಂದೂ ಮುಸಲ್ಮಾನರು ಲಕ್ಷಾಂತರ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಾರೆ ಎಂದ ಅವರು, ಧರ್ಮದ ಆಧಾರದ ಮೇಲೆ ನಾಗರಿಕತ್ವವನ್ನು ಒಪ್ಪಿಕೊಳ್ಳಬಾರದು ಎಂದು ಅಂದಿನ ಸಂವಿಧಾನ ರಚನಾ ಸಮಿತಿ ತೀರ್ಮಾನಿಸಿದೆ. ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ಮತ್ತು ದೇಶದ ಏಕತೆಗಾಗಿ ಎಂದೂ ಧ್ವನಿ ಎತ್ತದವರು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿ ಮಡಿದ ಮುಸ್ಲಿಂ ಸಮುದಾಯದವರ ಇಂದಿನ ಪೀಳಿಗೆಯನ್ನು ದೇಶದಿಂದ ಹೊರ ಹಾಕಲು ತೀರ್ಮಾನಿಸಿದ್ದಾರೆ. ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಆರೆಸ್ಸೆಸ್‍ನ ಈ ದೇಶ ಒಡೆಯುವ ಸಂಚನ್ನು ಪ್ರಜ್ಞಾವಂತರೆಲ್ಲರೂ ವಿಫಲಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ನಾಗರಿಕತ್ವ ನೀಡುವುದು ಹೊಸದೇನಲ್ಲ. ನಮ್ಮ ವಿರೋಧ ನಾಗರಿಕತ್ವ ನೀಡುತ್ತಿರುವುದಕ್ಕಲ್ಲ, ಅವಿಭಜಿತ ದೇಶಗಳ ಮುಸ್ಲಿಂ ನಿರಾಶ್ರಿತರಿಗೆ ಪೌರತ್ವ ನೀಡುವಂತಿಲ್ಲ ಎಂಬುದಕ್ಕೆ ನಮ್ಮ ವಿರೋಧವಿದೆ. ಈ ಮೂಲಕ ಮುಸ್ಲಿಂ ರಾಷ್ಟ್ರಗಳನ್ನು ಕ್ರೂರಿ ಎಂದು ಬಿಂಬಿಸಲು ಹೊರಟಿದ್ದಾರೆ. ಅಕ್ಕಿಯಲ್ಲಿ 4 ಕಲ್ಲುಗಳಿವೆ ಎಂದರೆ ಕಲ್ಲು ತೆಗೆಯದೆ ಎಲ್ಲ ಅಕ್ಕಿಯನ್ನು ಎಸೆಯುವ ಮೂರ್ಖ ನಿರ್ಧಾರ ಈ ಕಾಯ್ದೆಯ ಹಿಂದಿದೆ ಎಂದು ಉದಾಹರಿಸಿದ ಅವರು, ನಿರಾಶ್ರಿತರು ಮತ್ತು ನುಸುಳುಕೋರರು ಎಂದು ವಿಗಂಡಿಸಿ ನುಸುಳುಕೋರರನ್ನು ಹೊರದಬ್ಬುವ ಪ್ರಯತ್ನ ನಡೆದಿದೆ. ಸಿಎಎ ಮುಸಲ್ಮಾನರಿಗೆ ಮಾತ್ರ ವಿರುದ್ಧವಾಗಿದೆ ಎಂಬ ಬ್ರಾಂತಿ ಕೆಲವರಲ್ಲಿದೆ. ಇದು ಆದಿವಾಸಿಗಳು, ಹಿಂದೂಗಳು ಹಾಗೂ ಇತರ ಧರ್ಮಗಳ ಜನರಿಗೂ ಕಂಟಕವಾಗಲಿದೆ ಎಂದರು.
ಸಿಪಿಐಎಂಎಲ್ ಮುಖಂಡ ಆರ್.ಮಾನಸಯ್ಯ ಮಾತನಾಡಿ, ದೇಶ ವಿರೋಧಿಗಳು ಪಾರ್ಲಿಮೆಂಟಿಗೆ ಹೋದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ ಇಳಿಯುತ್ತಾರೆ ಎಂಬುದಕ್ಕೆ ಇತ್ತೀಚಿನ ಚಳವಳಿಗಳೇ ಸಾಕ್ಷಿಯಾಗಿವೆ. ತರಾತುರಿಯಲ್ಲಿ ಸಿಎಎ ಕಾಯ್ದೆ ಮಾಡುವ ಮುನ್ನ ಸಾರ್ವಜನಿಕವಾಗಿ ಸೂಚನೆ ಹೊರಡಿಸಲಿಲ್ಲ.ಇದರಿಂದಲೇ ಗೊತ್ತಾಗಲಿದೆ ಈ ಕಾಯ್ದೆ ಹಿಂದೆ ಮೋಸ, ಷಡ್ಯಂತ್ರ ಅಡಗಿದೆ ಎಂಬುದು ಎಂದರು.
ವೇದಿಕೆ ಸಂಚಾಲಕ ಬಿ.ರುದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶವು ಹಿಂದುತ್ವ, ಕೋಮುವಾದಿ ಫ್ಯಾಸಿಸ್ಟ್ ಗಳ ಗಂಡಾಂತರಕ್ಕೆ ಗುರಿಯಾಗುತ್ತಿದೆ. ಎರಡನೇ ಅವಧಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದ ಮೇಲೆ ದಾಳಿ ಮಾಡುತ್ತಿದೆ. ಇದರ ಪರಿಣಾಮ ಆರ್ಥಿಕ ಕುಸಿತ, ರೈತರ ಆತ್ಮಹತ್ಯೆ, ನೆರೆ ಸಂತ್ರಸ್ತರ ತೊಳಲಾಟ, ದಲಿತ, ಅಲ್ಪಸಂಖ್ಯಾತರ, ಆದಿವಾಸಿಗಳ, ಕಾರ್ಮಿಕರ, ಮಹಿಳೆಯರ ಮೇಲೆ ದೌರ್ಜನ್ಯಗಳು ಮುಂದುವರಿದಿವೆ. ಇದಕ್ಕೆಲ್ಲ ಇರುವ ಒಂದೇ ಪರಿಹಾರ ಎಂದರೆ ದೇಶದ ಜನರು ಪ್ರಜ್ಞಾವಂತರಾಗಬೇಕು ಮತ್ತು ಎಲ್ಲ ಪ್ರಗತಿಪರ ಸಂಘಟನೆಗಳು, ಮುಖಂಡರು ಒಂದೇ ಒಕ್ಕೂಟದಡಿ ಹೋರಾಟಕ್ಕೆ ಧುಮುಕಿ ಕೋಮುವಾದಿಗಳ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು ಎಂದರು.
ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಗೌಸ್ ಮೊಯುದ್ದೀನ್, ಪರಮೇಶ್ವರ್, ರಾಜರತ್ನಂ, ಯೂಸುಫ್ ಹಾಜಿ, ವಂಸತ್ ಕುಮಾರ್ ಕೆ.ಟಿ.ರಾಧಾಕೃಷ್ಣ, ಅತೀಕ್ ಖೈಸರ್, ಮುಫ್ತಿ ಅನ್ವರ್, ವಿಜಯ್, ನಾಸಿರ್ ಅಹ್ಮದ್ ಮತ್ತಿತರರು ಹಾಜರಿದ್ದರು.






.jpg)
.jpg)

