ಆ್ಯಸಿಡ್ ಸಂತ್ರಸ್ತೆ ಪರ ಹೋರಾಡಿದ್ದ ನ್ಯಾಯವಾದಿಗೆ ಮನ್ನಣೆ ನೀಡುವಂತೆ ಛಪಕ್ ನಿರ್ಮಾಪಕರಿಗೆ ಹೈಕೋರ್ಟ್ ಆದೇಶ

ಹೊಸದಿಲ್ಲಿ,ಜ.12: ಆ್ಯಸಿಡ್ ದಾಳಿ ಸಂತ್ರಸ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಅಗರವಾಲ್ ಪರ ಹೋರಾಡಿದ್ದ ನ್ಯಾಯವಾದಿ ಅಪರ್ಣಾ ಭಟ್ ಅವರ ಹೆಸರನ್ನು ಚಿತ್ರದ ಆರಂಭದಲ್ಲಿ ತೋರಿಸಲಾಗುವ ಕ್ರೆಡಿಟ್ ಟೈಟಲ್ ಗಳಲ್ಲಿ ಉಲ್ಲೇಖಿಸುವಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟನೆಯ ‘ಛಪಕ್’ ಚಿತ್ರದ ನಿರ್ಮಾಪಕರಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ಆದೇಶಿಸಿದೆ.
ಇದಕ್ಕಾಗಿ ಜ.15ರ ಗಡುವನ್ನು ಅದು ವಿಧಿಸಿದೆ. ಚಿತ್ರವು ಅಗರವಾಲ್ ಅವರ ಬದುಕಿನ ಕಥೆಯನ್ನು ಆಧರಿಸಿದೆ. ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ 32 ಹರೆಯದ ವ್ಯಕ್ತಿಯೋರ್ವ ಆಗ ಕೇವಲ 15 ವರ್ಷದವರಾಗಿದ್ದ ಅಗರವಾಲ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ.
ಭಟ್ ಹೆಸರಿಗೆ ಮನ್ನಣೆ ನೀಡುವ ಜೊತೆಗೆ,‘ಲಕ್ಷ್ಮಿ ಅಗರವಾಲ್ ಅವರನ್ನು ಪ್ರತಿನಿಧಿಸಿದ್ದ ಭಟ್ ಅವರು ನೀಡಿರುವ ಮಾಹಿತಿಗಳಿಗಾಗಿ ಕೃತಜ್ಞತೆಗಳು ’ಎಂಬ ಸಾಲನ್ನು ಸೇರಿಸುವಂತೆಯೂ ನ್ಯಾ.ಪ್ರತಿಭಾ ಎಂ. ಸಿಂಗ್ ಅವರು ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್ ಮತ್ತು ನಿರ್ಮಾಣ ಸಂಸ್ಥೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್‌ಗೆ ಆದೇಶಿಸಿದ್ದಾರೆ.
ಅಗರವಾಲ್ ಹೆಸರನ್ನು ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಸೇರಿಸುವವರೆಗೆ ಯಾವುದೇ ವಿದ್ಯುನ್ಮಾನ ಮಾಧ್ಯಮದಲ್ಲಿ ಚಿತ್ರದ ಬಿಡುಗಡೆಯನ್ನು ನ್ಯಾಯಾಲಯವು ನಿರ್ಬಂಧಿಸಿದೆ.
ಭಟ್ ಹೆಸರನ್ನು ಸೇರಿಸುವಂತೆ ವಿಚಾರಣಾ ನ್ಯಾಯಾಲಯವು ಗುರುವಾರ ಫಾಕ್ಸ್ ಸ್ಟಾರ್‌ಗೆ ಆದೇಶಿಸಿದ್ದು,ಇದನ್ನು ಪ್ರಶ್ನಿಸಿ ಅದು ಹೈಕೋರ್ಟ್ ಮೆಟ್ಟಿಲನ್ನೇರಿತ್ತು.
ಭಟ್ ಅಗರವಾಲ್ ಪರ ವರ್ಷಗಳ ಕಾಲ ಕಾನೂನು ಸಮರ ನಡೆಸಿದ್ದರು. ಚಿತ್ರದ ನಿರ್ಮಾಣದಲ್ಲಿಯೂ ಅವರು ನೆರವಾಗಿದ್ದರು.
ಈಗ ಖ್ಯಾತ ಸಾಮಾಜಿಕ ಕಾರ್ಯಕರ್ತೆಯಾಗಿ ಹೆಸರಾಗಿರುವ ಅಗರವಾಲ್ ಆ್ಯಸಿಡ್ ದಾಳಿ ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಮತ್ತು ಆ್ಯಸಿಡ್ ಮಾರಾಟದ ನಿರ್ಬಂಧಕ್ಕಾಗಿ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರದಲ್ಲಿ ಮಾಲತಿ ಹೆಸರಿನ ಅವರ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ.







