ಮೌನ ಇನ್ನು ಮುಂದೆ ನಮ್ಮ ಆಯ್ಕೆಯಲ್ಲ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು
ಜೆಎನ್‌ಯು ಮೇಲಿನ ದಾಳಿಗೆ ಖಂಡನೆ

ಬೆಂಗಳೂರು, ಜ.12: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ದೇಶದೆಲ್ಲೆಡೆ ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಟನೆ ನಡೆದಿದೆ. ಆದರೆ ವಿಶೇಷವೆಂದರೆ, ಇದೇ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಇತರೆಡೆ ನಡೆಯುವ ರಾಜಕೀಯ ಅಥವಾ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಟಸ್ಥವಾಗಿ ಉಳಿಯುತ್ತಿದ್ದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಪೌರತ್ವ ವಿರೋಧಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದೆ. ಅಲ್ಲದೆ ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಬೇಕು, ಜೈಲಿನಲ್ಲಿರುವ ಭೀಮ್ ಸೇನೆಯ ಅಧ್ಯಕ್ಷ ಚಂದ್ರಶೇಖರ ಆಝಾದ್‌ರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುವ ಬ್ಯಾನರ್‌ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಮೌನವು ಇನ್ನು ಮುಂದೆ ನಮ್ಮ ಆಯ್ಕೆಯಾಗಿಲ್ಲ ಎಂದು ತಿಳಿದುಕೊಂಡಿದ್ದೇವೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳ ಬಳಿಕ, ಇನ್ನೂ ಸುಮ್ಮನಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯೋರೆಟಿಕಲ್ ಸೈಯನ್ಸಸ್ (ಐಸಿಟಿಎಸ್) ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಪ್ರೊ. ಸುವೃತ್ ರಾಜು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಐಐಎಸ್‌ಸಿ ಇದುವರೆಗೆ ರಾಜಕೀಯ ಘಟನೆಗಳ ಬಗ್ಗೆ ತಟಸ್ಥವಾಗಿ ಇರುತ್ತಿತ್ತು. ಆದರೆ ಈಗ ಸಹನೆಗೂ ಒಂದು ಮಿತಿಯಿದೆ. 7 ವರ್ಷದಿಂದ ಇಲ್ಲಿ ಬೋಧಿಸುತ್ತಿದ್ದೇನೆ. ಆದರೆ ಇದುವರೆಗೆ ಇಂತಹ ಘಟನೆ ನಡೆದಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರ, ಜಾಮಿಯ ಮಿಲ್ಲಿಯಾ ಇಸ್ಲಾಮಿಯಾ ವಿವಿ, ಅಮು (ಆಲಿಗಢ ಮುಸ್ಲಿಂ ವಿವಿ) ಮತ್ತು ಜೆಎನ್‌ಯುವಿನಲ್ಲಿ ನಡೆದ ಘಟನೆಗಳು ಹಾಗೂ ಕೇಂದ್ರ ಸರಕಾರದ ನಿರ್ಧಾರಗಳ ವಿರುದ್ಧದ ಹತಾಶೆ ಇದೀಗ ಈ ಸಂಸ್ಥೆಯ ವಿದ್ಯಾರ್ಥಿಗಳನ್ನೂ ಬೀದಿಗೆ ಇಳಿದು ಪ್ರತಿಭಟಿಸುವಂತೆ ಮಾಡಿದೆ ಎಂದು ಹೇಳಿದರು.
ಐಐಎಸ್‌ಸಿಯ 6 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಕರೆ ನೀಡಿದಾಗ ಹೆಚ್ಚೆಂದರೆ 100ರಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಅನ್ಯಾಯವಾಗುತ್ತಿದ್ದರೂ ನೀವು ತಟಸ್ಥರಾಗಿದ್ದರೆ ನೀವು ದಬ್ಬಾಳಿಕೆಯ ಪರ ವಹಿಸಿದ್ದೀರಿ ಎಂದಾಗುತ್ತದೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ರವಾನಿಸಲಾಯಿತು. ಬಳಿಕ ಪ್ರತಿಭಟನೆ ಕರೆಗೆ ಓಗೊಟ್ಟು ಆಗಮಿಸಿದ ವಿದ್ಯಾರ್ಥಿಗಳ, ಬೋಧಕ ಸಿಬ್ಬಂದಿಗಳ ಸಂಖ್ಯೆ ಕಂಡು ಆಶ್ಚರ್ಯವಾಯಿತು. ಎನ್‌ಸಿಬಿ, ಐಸಿಟಿಎಸ್, ಎನ್‌ಐಎಎಸ್ ಮುಂತಾದ ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡರು. ಇಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿರುವ ಸಂಕೇತ ಇದಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ಫೆಬ್ರವರಿಯಲ್ಲಿ ಐಐಎಸ್‌ಸಿಯ ಕ್ಯಾಂಪಸ್ ಚುನಾವಣೆ ನಡೆಯಲಿದೆ. ಇದುವರೆಗೆ ರಾಜಕೀಯದಿಂದ ದೂರ ಉಳಿದಿದ್ದ ಐಐಎಸ್‌ಸಿ ವಿದ್ಯಾರ್ಥಿ ಯೂನಿಯನ್ ಚುನಾವಣೆ ಈ ಬಾರಿ ನಿಕಟ ಪೈಪೋಟಿಯ ಕಣವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.







