ಶಾಲೆಗಳಲ್ಲಿ ತುಳು ಲಿಪಿ ಕಲಿಸುವ ಕೆಲಸ ನಡೆಯಲಿ: ರಘುಪತಿ ಭಟ್

ಉಡುಪಿ, ಜ.12: ತುಳು ಲಿಪಿ ಅತ್ಯಂತ ಶ್ರೇಷ್ಠವಾದುದು. ಇದನ್ನು ಶಾಲೆ ಗಳಲ್ಲಿ ಮಕ್ಕಳಿಗೆ ಪರಿಚಯಿಸುವ ಕೆಲಸ ಮಾಡಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತುಳು ಲಿಪಿ ಕಲಿಸುವುದಾದರೆ ಸರಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ತುಳುಕೂಟದ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಕೆಮ್ತೂರು ತುಳು ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ತುಳು ಭಾಷೆಯು ಧರ್ಮ, ಗಡಿ ಮೀರಿ ಬೆಳೆದಿದೆ. ತುಳು ಲಿಪಿ ಕಲಿಸುವ ತರಬೇತಿಗಳನ್ನು ಆಯೋಜಿಸಬೇಕು. ತುಳುಕೂಟದ ನೇತೃತ್ವದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ತುಳು ಲಿಪಿಯ ಮೂಲಕ ಸಹಿ ಹಾಕುವ ಕೆಲಸವನ್ನು ಮೊದಲು ಆರಂಭಿಸಿ ಅದರಲ್ಲಿ ಆಸಕ್ತಿ ಮೂಡಿಸುವಂತೆ ಮಾಡಬೇಕು ಎಂದರು.
ತುಳು ನಾಟಕವನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು. ಇಂದು ವಿವಿಧ ಕಾರ್ಯಕ್ರಮಗಳ ಮೂಲಕ ತುಳು ಭಾಷೆಯನ್ನು ಬೆಳೆಸುವ ಮನೋಭಾವನೆ ಹಾಗೂ ವಿಶೇಷ ಆಸಕ್ತಿ ಬೆಳೆಯುತ್ತಿದೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕದ ಕೊಡುಗೆ ಅಪಾರ. ಅದೇ ರೀತಿ ತುಳು ಸಿನಿಮಾದ ಯಶಸ್ಸು ತುಳು ಭಾಷೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ವಹಿಸಿದ್ದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಬೆಂಗಳೂರು ತುಳುಕೂಟದ ಅಧ್ಯಕ್ಷ ಬಿ.ದಿನೇಶ್ ಹೆಗ್ಡೆ, ಉದ್ಯಮಿಗಳಾದ ಪಿ.ಪುರುಷೋತ್ತಮ್ ಶೆಟ್ಟಿ, ಟಿ.ರವೀಂದ್ರ ಪೂಜಾರಿ, ಸಮಾಜ ಸೇವಕ ಯು.ವಿಶ್ವನಾಥ ಶೆಣೈ, ತುಳುಕೂಟದ ಸ್ಥಾಪಕ ಅಧ್ಯಕ್ಷ ಡಾ.ಭಾಸ್ಕಾನಂದ ಕುಮಾರ್ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಸ್ಪರ್ಧೆಯ ಕುರಿತು ಮಾತನಾಡಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ವಿಜೇತರ ಪಟ್ಟಿಯನ್ನು ವಾಚಿಸಿದರು.
ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿವೇಕಾನಂದ ಎನ್. ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಪ್ರಥಮ ಬಹುಮಾನ ಪಡೆದ ಮಂಗಳೂರು ಪಾದುವರಂಗ ಅಧ್ಯಯನ ಕೇಂದ್ರದ ‘ಕೆಂಡೋನಿಯನ್ಸ್’ ನಾಟಕದ ಮರು ಪ್ರದರ್ಶನ ನಡೆಯಿತು.







