ವಿಶಿಷ್ಟ ಮೇಳದಲ್ಲಿ ಸಂಭ್ರಮಿಸಿದ ‘ಭಿನ್ನ ಸಾಮರ್ಥ್ಯದ ಮಕ್ಕಳು, ಮಕ್ಕಳ ಮನಸ್ಸಿನ ಹಿರಿಯರು’

ಮಂಗಳೂರು, ಜ.12: ಸೇವಾ ಭಾರತಿಯ ಅಂಗಸಂಸ್ಥೆ ‘ಆಶಾ ಜ್ಯೋತಿ’ ಸಂಸ್ಥೆಯು ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್‌ನಲ್ಲಿ ರವಿವಾರ ಆಯೋಜಿಸಿದ್ದ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2020’ ಕಾರ್ಯಕ್ರಮದಲ್ಲಿ ‘ಭಿನ್ನ ಸಾಮರ್ಥ್ಯದ ಮಕ್ಕಳು-ಮಕ್ಕಳ ಮನಸ್ಸಿನ ಹಿರಿಯರು’ ಸಂಭ್ರಮಿಸಿದರು.
ತಿರುಗುವ ತೊಟ್ಟಿಲಲ್ಲಿ ತೂಗುವ, ಉತ್ಸಾಹದಿಂದ ಕುದುರೆಯ ಬೆನ್ನೇರಿ ನಗುತ್ತಾ ಸಾಗುವ, ಉಂಡೆ, ಚಕ್ಕುಲಿ, ಬೇಲ್‌ಪುರಿ ಮೆಲ್ಲುವ, ರಿಂಗ್ ಎಸೆಯುವ, ಸಂಭ್ರಮದಿಂದ ಜಿಗಿಯುವ ಚಿಣ್ಣರು, ಯುವಜನರು, ಹಿರಿಯರು ಭೇದವಿಲ್ಲದೆ ಬೆರೆಯುವ ಎಲ್ಲರೂ ಅಲ್ಲೊಂದು ಜಾತ್ರೆಯ ಸಂಭ್ರಮವನ್ನೇ ಕಟ್ಟಿಕೊಟ್ಟಿದ್ದರು.
ಮುಗ್ಧ ಮುಖದ ಮುದ್ದು ಮಕ್ಕಳು ಮನದಣಿಯದೆ ನಲಿದಾಡಿದರು. ಕನಸು ಎಂಬಂತೆ ಕುದುರೆ ಸವಾರಿಯ ಖುಷಿಯನ್ನು ಸಂಭ್ರಮಿಸಿದರು. ಬಹುವರ್ಣದ ತಿರುಗುವ ತೊಟ್ಟಿಲಿನಲ್ಲಿ ಒಬ್ಬರನ್ನೊಬ್ಬರು ಅಪ್ಪಿ ಕುಳಿತು ಸುತ್ತುವ ಮಜಾ ಅನುಭವಿಸಿದರು. ಜಾರುಬಂಡಿಯಲ್ಲಿ ಜಾರಿದರು. ನೋವು ಮರೆತು ನಲಿವಿನೊಂದಿಗೆ ಬೆರೆತರು. ಸಕ್ಕರೆ ಮಿಠಾಯಿ, ಬಾಳೆಹಣ್ಣು, ಕಲ್ಲಂಗಡಿ, ಐಸ್‌ಕ್ಯಾಂಡಿ, ಸಕ್ಕರೆ ಕ್ಯಾಂಡಿ, ಮಜ್ಜಿಗೆ, ಲಸ್ಸಿ, ನೆಲಗಡಲೆ, ಪೋಡಿ, ಚಕ್ಕುಲಿ ಉಂಡೆ, ಪಾನಿಪುರಿ, ಬೇಲ್‌ಪುರಿ, ಚರುಂಬುರಿ.. ಬನ್, ಕೇಕ್.. ಹೀಗೆ ಸುಮಾರು 25 ಸ್ಟಾಲ್‌ಗಳಿದ್ದ ತಿಂಡಿ ತಿನಸುಗಳನ್ನು ತಿಂದು ನಲಿದಾಡಿದರು.
ಬಾಲ ಬಿಡಿಸುವುದು, ತಿಲಕ ಇಡುವುದು, ರಿಂಗ್, ಚೆಂಡು ಬಿಸಾಡುವುದು, ಡಬ್ಬಕ್ಕೆ ಗುರಿ ಇಡುವುದು... ಮತ್ತಿತರ ಮೋಜಿನ ಆಟಗಳಲ್ಲಿ ಮಕ್ಕಳು ಸಂಭ್ರಮದಿಂದ ಭಾಗವಹಿಸಿದರು. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಜಾದೂಗಾರ ಮುನಾವರ್ ಸುಮಾರು ಎರಡು ತಾಸುಗಳ ಕಾಲ ಕ್ಲೋಸಪ್ ಜಾದೂ ಮೂಲಕ ಎಲ್ಲರನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ದರು. ಆಶಾಜ್ಯೋತಿ ಸಂಸ್ಥೆ ಅಧ್ಯಕ್ಷ ಡಾ. ಮುರಳೀಧರ ನಾಯ್ಕೆ ವಿಕಲಚೇತನರಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ರೋಮನ್ ಆ್ಯಂಡ್ ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯವರೆಗೆ ವಿದ್ಯಾಭ್ಯಾಸ ಪಡೆದು ಮಂಗಳೂರು ವಿವಿ ಬಿಎಸ್‌ಡಬ್ಲ್ಯೂ ಪದವಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ರ್ಯಾಂಕ್‌ಗಳಿಸಿದ ವಿದ್ಯಾರ್ಥಿಗಳಾದ ನಿತ್ಯಾನಂದ ಕಾರ್ಕಳ, ಗುರುರಾಜ ಬೆಳ್ತಂಗಡಿ, ಪ್ರದೀಪ್ ಕುಮಾರ್ ಉಡುಪಿ ಅವರನ್ನು ಸನ್ಮಾನಿಸಲಾಯಿತು.
ಈ ಸಂತಸದ ಕ್ಷಣ ಅನುಭವಿಸಲು ತಮ್ಮ ಪಾಲಕರೊಂದಿಗೆ ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದರು. ಸೇವಾ ಭಾರತಿಯ ಅಂಗಸಂಸ್ಥೆ ‘ಆಶಾ ಜ್ಯೋತಿ’ಯು ಭಿನ್ನ ಸಾಮರ್ಥ್ಯದ ಮಕ್ಕಳನ್ನು ಖುಷಿ ಪಡಿಸುವುದು, ವೈದ್ಯಕೀಯ ತಪಾಸಣೆ ಮಾಡಿಸುವುದು, ಸರಕಾರದಿಂದ ದೊರೆಯುವ ಸವಲತ್ತುಗಳ ಮಾಹಿತಿ ನೀಡುವುದು ಇತ್ಯಾದಿ ಉದ್ದೇಶದೊಂದಿಗೆ ಪ್ರತಿ ವರ್ಷ ಈ ಮೇಳ ನಡೆಸುತ್ತಿದೆ.
ಕಾರ್ಪೋರೇಶನ್ ಬ್ಯಾಂಕ್ ಆಡಳಿತ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವಿ. ಭಾರತಿ ವಿಶಿಷ್ಟ ಮೇಳ ಉದ್ಘಾಟಿಸಿದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಅತಿಥಿಯಾಗಿದ್ದರು. ಸೇವಾಭಾರತಿ ಮಂಗಳೂರು ಅಧ್ಯಕ್ಷೆ ಸುಮತಿ ವಿ. ಶೆಣೈ, ಆಶಾಜ್ಯೋತಿ ಕಾರ್ಯದರ್ಶಿ ಎಸ್. ರವಿನಾಥ ಕುಡ್ವ, ಕೋಶಾಧಿಕಾರಿ ಕೆ. ವಿಶ್ವನಾಥ ಪೈ, ಸಾವಿತ್ರಿ ಎಸ್. ರಾವ್ ಉಪಸ್ಥಿತರಿದ್ದರು.













