ನಾಳೆ ವಿಪಕ್ಷ ಸಭೆ: ಮಮತಾ, ಮಾಯಾವತಿ ಗೈರುಹಾಜರಿ ?
ಹೊಸದಿಲ್ಲಿ, ಜ.12: ಪೌರತ್ವ ಕಾಯ್ದೆ, ಎನ್‌ಆರ್‌ಸಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ಬಳಿಕ ದೇಶದ ರಾಜಕೀಯ ಪರಿಸ್ಥಿತಿಯ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಸೋಮವಾರ ಹೊಸದಿಲ್ಲಿಯಲ್ಲಿ ವಿಪಕ್ಷಗಳ ಸಭೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಆದರೆ ವಿಪಕ್ಷಗಳ ಒಗ್ಗಟ್ಟಿಗೆ ವೇದಿಕೆಯೆಂದು ಬಣ್ಣಿಸಲಾಗಿರುವ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮುಖ ಮುಖಂಡರಾದ ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿರುವುದು ವಿಪಕ್ಷಗಳ ಒಗ್ಗಟ್ಟಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಮುಂದಿನ ಹೋರಾಟದ ರೂಪುರೇಶೆ ತಯಾರಿಸಲು ವಿಪಕ್ಷಗಳ ಸಭೆ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಿದವರೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಆದರೆ ಕಾರ್ಮಿಕ ಸಂಘಟನೆ ಕರೆ ನೀಡಿದ್ದ ಭಾರತ ಬಂದ್ ಸಂದರ್ಭ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ ಹಾಗೂ ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದು ಹಿಂಸಾಚಾರ ಸಂಭವಿಸಿದ್ದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ದ್ವಿಮುಖ ಧೋರಣೆ ಖಂಡಿಸಿ ವಿಪಕ್ಷಗಳ ಸಭೆಯಿಂದ ದೂರ ಉಳಿಯುವುದಾಗಿ ಮಮತಾ ಘೋಷಿಸಿದ್ದಾರೆ.
ಪೌರತ್ವ ಕಾಯ್ದೆ, ಎನ್‌ಆರ್‌ಸಿ ಹೆಸರಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಡೆಸುತ್ತಿರುವುದು ಚಳವಳಿಯಲ್ಲ, ವಿಧ್ವಂಸಕತೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಯಾವತಿ ಕೂಡಾ ಕಾಂಗ್ರೆಸ್‌ನ ನಿಲುವನ್ನು ಖಂಡಿಸಿದ್ದಾರೆ. ರಾಜಸ್ತಾನದ ಕೋಟ ನಗರದ ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟ ಪ್ರಕರಣದಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ಭೇಟಿಯಾಗದ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಈ ರೀತಿ ರಾಜಕೀಯ ಲಾಭದ ಲೆಕ್ಕಾಚಾರ ಮತ್ತು ನಾಟಕವನ್ನು ಖಂಡಿಸಿ, ಹೊಸದಿಲ್ಲಿಯಲ್ಲಿ ನಡೆಯುವ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.







