ಮಂಗಳೂರು : ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ

ಮಂಗಳೂರು : ಜಿಲ್ಲಾಡಳಿತ ಮತ್ತು ಕಾಲೇಜು ಶಿಕ್ಷಣ ಇಲಾಖೆಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರವಿವಾರ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಆರಂಭಿಸಲಾದ ಯುವ ಸಬಲೀಕರಣ ಕೇಂದ್ರವನ್ನು ಉದ್ಘಾಟಿಸಲಾಯಿತು. ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ ಎಸ್.ಬಿ., ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಶ್ರೀಧರ ಮಣಿಯಾಣಿ, ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಜಯಕರ ಭಂಡಾರಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಸಿ. ಸ್ವಾಗತಿಸಿದರು. ಡಾ.ಪಿ.ಶಿವರಾಮ್ ವಂದಿಸಿದರು. ಡಾ.ರವಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಯುವ ಸಬಲೀಕರಣ ಕೇಂದ್ರ
ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಉನ್ನತ ಮಟ್ಟದ ಶೈಕ್ಷಣಿಕ, ಔದ್ಯೋಗಿಕ ಮಾಹಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡುವ ‘ಯುವ ಸಬಲೀಕರಣ ಕೇಂದ್ರ’ ರಥಬೀದಿಯಲ್ಲಿರುವ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಗೊಂಡಿದೆ. ರಾಜ್ಯ ಸರಕಾರವು ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪ್ರತೀ ಜಿಲ್ಲೆಯ ಒಂದು ಲೀಡ್ ಕಾಲೇಜಿನಲ್ಲಿ ಯುವ ಸಬಲೀಕರಣ ಕೇಂದ್ರ ಆರಂಭಿಸುವ ಯೋಜನೆ ಹಾಕಿಕೊಂಡಿದೆ. ಅದರಂತೆ ದ.ಕ ಜಿಲ್ಲೆಯ ಯುವ ಸಬಲೀಕರಣ ಕೇಂದ್ರ ರಥಬೀದಿಯ ಕಾಲೇಜಿನಲ್ಲಿ ಸ್ಥಾಪನೆಯಾಗಿದೆ.
ಯುವಸಬಲೀಕರಣ ಕೇಂದ್ರವು ವೃತ್ತಿ ಆಯ್ಕೆ, ಸರಕಾರ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಯೋಜನೆಗಳು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಲು ಇರುವ ಅವಕಾಶಗಳು, ಶುಲ್ಕದ ವಿವರ, ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲ, ಕೌಶಲ್ಯ ಆಧಾರಿತ ಕಾರ್ಯಕ್ರಮಗಳು, ಹಾಸ್ಟೆಲ್ ಸೌಲಭ್ಯಗಳ ಮಾಹಿತಿ ಒದಗಿಸಲಿದೆ.
ಅಲ್ಪಾವಧಿ ತರಬೇತಿ ಶಿಬಿರಗಳ ಮೂಲಕ ಕೌಶಲ್ಯಗಳನ್ನು ತಿಳಿಸಿಕೊಡಲಿದೆ. ಪ್ರಾಢಶಾಲೆ, ಪ.ಪೂ. ಕಾಲೇಜು, ಐಟಿಐ, ತಾಂತ್ರಿಕ ಶಿಕ್ಷಣ ಪದವಿ, ನರ್ಸಿಂಗ್ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಒಬ್ಬ ಸಂಯೋಜಕರನ್ನು ಈ ಕೇಂದ್ರಕ್ಕೆ ನಿಯೋಜನೆ ಮಾಡಿ ಇಲ್ಲಿಂದ ಮಾಹಿತಿ ಪಡೆದು ಅದನ್ನು ವಿದ್ಯಾರ್ಥಿಗಳ ಜತೆಗೆ ಹಂಚಿಕೊಳ್ಳುವ ಉದ್ದೇಶವನ್ನು ಹೊಂದಲಾಗಿದೆ.
ನೇಮಕ: ಈ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಲೀಡ್ ಕಾಲೇಜಿನ ಇಬ್ಬರು ನುರಿತ ಪ್ರಾಧ್ಯಾಪಕರನ್ನು (ಒಬ್ಪರು ಪುರುಷ ಹಾಗೂ ಒಬ್ಬ ಮಹಿಳೆ) ಆಪ್ತ ಸಮಾಲೋಚಕರನ್ನಾಗಿ/ ಜ್ಞಾನಮಿತ್ರರನ್ನಾಗಿ ನೇಮಕ ಮಾಡಲಾಗುತ್ತದೆ. ಪ್ರತಿ ಕೇಂದ್ರದ ಕಾರ್ಯಚಟುವಟಿಕೆಗೆ ಪ್ರಾಂರಭಿಕವಾಗಿ 25,000 ರೂ. ಅನುದಾನ ದೊರೆಯಲಿದೆ.










