ಗೋವನ್ನು ಮುಟ್ಟಿದರೆ ನಕಾರಾತ್ಮಕ ಶಕ್ತಿ ದೂರ ಎಂದ ಮಹಾರಾಷ್ಟ್ರ ಸಚಿವೆ!

ಪೈಲ್ ಚಿತ್ರ
ಮುಂಬೈ,ಜ.12: ‘ನೂತನವಾಗಿ ರಚನೆಯಾದ ಮಹಾರಾಷ್ಟ್ರ ಮೈತ್ರಿ ಸರಕಾರದ ಸಚಿವರು ಈಗತಾನೇ ಪ್ರಮಾಣವಚನ ಸ್ವೀಕರಿಸಿದ್ದು, ಹಣ ಮಾಡಲು ಆರಂಭಿಸಿಲ್ಲವೆಂದು’ ಹೇಳಿದ್ದಕ್ಕಾಗಿ ತರಾಟೆಗೊಳಗಾದ ಸಚಿವೆ ಯಶೋಮತಿ ಠಾಕೂರ್ ಅವರು ಇದೀಗ ದನವನ್ನು ಮುಟ್ಟಿದಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದೆಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಗ್ರಾಸವಾಗಿದ್ದಾರೆ.
ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವೆಯಾಗಿರುವ ಯಶೋಮತಿ ಅವರು ತಿಯೋಸಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಮಹಾರಾಷ್ಟ್ರದ ಅಮರಾವತಿ ಪಟ್ಟಣದಲ್ಲಿ ಶನಿವಾರ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ‘‘ ನೀವು ದನವನ್ನು ಮುಟ್ಟಿದಲ್ಲಿ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗುವುದುಎಂದು ನಮ್ಮ ಸಂಸ್ಕೃತಿ ಹೇಳುತ್ತದೆ’’ ಎಂದು ಹೇಳಿದ್ದರು.
ಇದಕ್ಕೂ ಮೊದಲು ವಾಶಿಮ್ ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಭಾಷಣ ಮಾಡಿದ ಸಂದರ್ಭ ಅವರು, ‘‘ನಾವು ಈಗ ತಾನೇ ಅಧಿಕಾರಕ್ಕೆ ಬಂದಿದ್ದೇವೆ. ನಮ್ಮ ಜೇಬುಗಳು ಇನ್ನೂ ಸಾಕಷ್ಟು ಬೆಚ್ಚಗಾಗಿಲ್ಲ’’ ಎಂದು ಹೇಳಿದ್ದರು.
ಪ್ರತಿಪಕ್ಷಗಳು ನೀಡುವ ಹಣವನ್ನು ಪಡೆದುಕೊಳ್ಳಿರಿ, ಆದರೆ ಮತ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ನೀಡಬೇಕೆಂದು ಆಕೆ ಮತದಾರರಿಗೆ ಕರೆ ನೀಡಿದ್ದರು.





