ಬೆಂಗಳೂರು: ಜೆಎನ್‌ಯು ದಾಳಿ, ಸಿಎಎ ವಿರೋಧಿಸಿ ಮಹಿಳೆಯರ ಪ್ರತಿಭಟನೆ

ಬೆಂಗಳೂರು, ಜ.12: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜೆಎನ್‌ಯು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ಕರ್ನಾಟಕ ಮುಸ್ಲಿಮ್ ಮಹಿಳಾ ಆಂದೋಲನ ಸದಸ್ಯರು ಪ್ರತಿಭಟನೆ ನಡೆಸಿದರು.
ರವಿವಾರ ನಗರದ ಪುರಭವನ ಮುಂಭಾಗ ಜಮಾಯಿಸಿದ ನೂರಾರು ಮಹಿಳಾ ಸದಸ್ಯರು ನಾವು ಯಾವ ದೇಶದವರು ಎಂಬುದನ್ನು ತಿಳಿಯಲು ದಾಖಲೆ ಕೊಡುವುದಿಲ್ಲ. ನಮ್ಮ ರಕ್ತವೇ ಭಾರತೀಯವಾಗಿದೆ, ಹಿಂದೂ-ಮುಸ್ಲಿಮ್, ಸಿಖ್ ಇಸಾಯಿ ನಾವೆಲ್ಲ ಭಾರತೀಯರು, ಭಾರತೀಯರಾದ ನಾವು ಸಿಎಎ ವಿರೋಧಿಸುತ್ತೇವೆ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆಂದೋಲನದ ಅಧ್ಯಕ್ಷೆ ನಗ್ಮಾ ಶೇಖ್, ಕೇಂದ್ರ ಸರಕಾರ ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಮುಂದಾಗಿದೆ. ಸಮಾನತೆಯ ಹಕ್ಕನ್ನು ಕಲ್ಪಿಸಿದ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ನರೇಂದ್ರ ಮೋದಿ ಸರಕಾರ ನಡೆದುಕೊಳ್ಳುತ್ತಿದೆ. ಇದರ ಹಿಂದೆ ಸಂಘ ಪರಿವಾರದ ಇದೆ ಎಂದು ಟೀಕಿಸಿದರು.
ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಉದ್ದೇಶ ಪೂರಕವಾಗಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಜೊತೆಗೆ ಗಾಯಗೊಂಡಿರುವ ವಿದ್ಯಾರ್ಥಿಗಳ ಮೇಲಿನ ಪ್ರಕರಣವನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಂದೋಲನದ ಸಂಚಾಲಕರಾದ ಉಮ್ರಾಝ್ ಖಾನ್, ಅಕ್ಬರ್ ಇನಾಯತ್, ನಸ್ರೀನ್ ರೇಷ್ಮಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







