ಪೊಲೀಸ್ ಆಯುಕ್ತರು ಸಂಪೂರ್ಣ ವೀಡಿಯೊ ಬಹಿರಂಗಪಡಿಸಲಿ : ವಿವಿಧ ಸಂಘಟನೆಗಳ ಪ್ರತಿನಿಧಿಗಳ ಆಗ್ರಹ
ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣ

ಫೈಲ್ ಚಿತ್ರ
ಮಂಗಳೂರು, ಜ.12: ಮಂಗಳೂರು ಹಿಂಸಾಚಾರ-ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದ ‘ಸಿಡಿ’ಗೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಶನಿವಾರ ನೀಡಿರುವ ಪ್ರತಿಕ್ರಿಯೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಪೊಲೀಸ್ ಆಯುಕ್ತರ ಹೇಳಿಕೆಗಳನ್ನು ಪ್ರಶ್ನಿಸಲಾಗುತ್ತಿದೆ.
‘‘ಈ ವೀಡಿಯೊಗಳು ಅಪೂರ್ಣತೆಯಿಂದ ಕೂಡಿದೆ. ಸಮರ್ಪಕ ಮಾಹಿತಿ ನೀಡದ ಈ ತುಣುಕುಗಳನ್ನು ಸಂಪೂರ್ಣ ಆಡಿಯೋ ದೃಶ್ಯದೊಂದಿಗೆ ನೋಡಬೇಕಾಗಿದೆ ಮತ್ತು ಸರಿಯಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ತನಿಖೆಯ ಬಳಿಕ ಈ ಘಟನೆಯ ಸತ್ಯಾಸತ್ಯತೆ ಹೊರಬೀಳಲಿದೆ’’ ಎಂದು ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಪೊಲೀಸ್ ಆಯುಕ್ತರ ಹೇಳಿಕೆ ಖುದ್ದು ‘ರಾಜಕಾರಣಿ’ಗಳ ಹೇಳಿಕೆಯಂತಿತ್ತು. ಘಟನೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಸಿಡಿ ‘ಅಪೂರ್ಣ’ವಾಗಿದೆ ಎಂದು ತಕ್ಷಣ ಪ್ರತಿಕ್ರಿಯಿಸಿರುವ ಆಯುಕ್ತರು, ಕೆಲವು ದೃಶ್ಯ ಮಾಧ್ಯಮಗಳು ಬಿತ್ತರಿಸಿರುವ ದೃಶ್ಯಾವಳಿಗಳ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಯಾಕೆ ? ಎಂದು ಪ್ರಶ್ನಿಸಿದ್ದಾರೆ.
ಬಂದರು ಠಾಣೆಯ ಆವರಣದ ಸಿಸಿಟಿವಿಯ ದೃಶ್ಯಾವಳಿ ಬಿಡುಗಡೆಗೊಳಿಸಿ
ಬಂದರು ಠಾಣೆಯ ಸುತ್ತಮುತ್ತ ಏಳು ಸಾವಿರ ಮಂದಿ ಜಮಾಯಿಸಿದ್ದರು. ಠಾಣೆಗೆ ದಾಳಿ ನಡೆಸಲು ಮುಂದಾಗಿದ್ದರು, ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು, ಪೊಲೀಸರ ಕೊಲೆಗೆ ಯತ್ನಿಸಿದ್ದರು ಎಂದೆಲ್ಲಾ ಆಯುಕ್ತರು ಹೇಳಿಕೊಂಡಿದ್ದರು. ಈ ಹೇಳಿಕೆಯು ಸತ್ಯಾಂಶದಿಂದ ಕೂಡಿದ್ದೇ ಆದರೆ, ತಕ್ಷಣ ಬಂದರ್ ಠಾಣೆಯ ಆವರಣದಲ್ಲಿ ಅಳವಡಿಸಲಾದ ‘360 ಡಿಗ್ರಿ’ಯ ಸಿಸಿಟಿವಿಯ ದೃಶ್ಯಾವಳಿಯನ್ನು ಬಿಡುಗಡೆಗೊಳಿಸಲಿ. ಆಗ ಮಾತ್ರ ಅಲ್ಲಿ ಜಮಾಯಿಸಿದ 7 ಸಾವಿರ ಮಂದಿ, ಠಾಣೆಗೆ ದಾಳಿ ನಡೆಸಲು, ಬೆಂಕಿ ಹಚ್ಚಲು, ಕೊಲೆಗೆ ಯತ್ನಿಸಿದ್ದೆಲ್ಲವನ್ನೂ ಕಾಣಲು ಸಾಧ್ಯವಾಗಬಹುದು ಎಂಬ ಸಾರ್ವಜನಿಕ ಅಭಿಪ್ರಾಯ ಕೇಳಿಬರುತ್ತಿದೆ.
ಅಂಗಡಿಯ ಬಾಗಿಲು ಮುರಿದವರು ಯಾರು ?
ಬಂದರ್ನ ಎಂ.ಮನೋಹರ ಕಿಣಿ ಮಾಲಕತ್ವದ ‘ಗೇಮ್ ಕಿಂಗ್ ಗೋವಿ’ ಅಂಗಡಿಗೆ ಪ್ರತಿಭಟನಾಕಾರರು ನುಗ್ಗಿದ್ದರು ಮತ್ತು 1 ಲಕ್ಷ ರೂ. ನಷ್ಟವಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಂಗಡಿಯ ಮಾಲಕ ಮನೋಹರ ಕಿಣಿ ‘ನನ್ನ ಅಂಗಡಿಯಿಂದ ಯಾರೂ ಬಂದೂಕು-ಗುಂಡನ್ನು ಕೊಂಡು ಹೋಗಿಲ್ಲ. ಬಾಗಿಲು ಒಡೆದಿದ್ದಾರಷ್ಟೆ. ನನಗೆ 1 ಲಕ್ಷ ರೂ. ನಷ್ಟ ಆಗಲೂ ಇಲ್ಲ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ ತಿಳಿಸಿದ್ದರು.
ಹಾಗಿದ್ದರೆ ಕೋವಿ ಅಂಗಡಿಗೆ ನುಗ್ಗಿದವರು ಮತ್ತು ಬಾಗಿಲು ಒಡೆದವರು ಯಾರು ಎಂಬುದು ಕೂಡ ತಿಳಿಯಬೇಕಿದೆ. ಅಲ್ಲಿನ ಸಿಸಿಟಿವಿಯ ದೃಶ್ಯಾವಳಿಯನ್ನು ಬಹಿರಂಗಪಡಿಸಿದಾಗ ಮಾತ್ರ ಸತ್ಯಾಂಶ ತಿಳಿಯಲು ಸಾಧ್ಯ. ಕೋವಿ ಅಂಗಡಿಗೆ ನುಗ್ಗಿಲ್ಲ, ಗುಂಡು-ಬಂದೂಕು ಕಳವಾಗಿಲ್ಲ ಎಂದು ಸ್ವತಃ ಅಂಗಡಿ ಮಾಲಕರು ಸ್ಪಷ್ಟಪಡಿಸಿದ್ದರೂ 1 ಲಕ್ಷ ರೂ. ನಷ್ಟವಾಗಿದೆ ಎಂದು ಅವರಿಂದ ಬಲವಂತವಾಗಿ ದೂರು ಕೊಡಿಸಲಾಗಿದೆಯೇ ? ಎಂದು ಪ್ರಶ್ನಿಸಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಪೊಲೀಸ್ ಆಯುಕ್ತರು ಈ ಪ್ರದೇಶದ ಸಿಸಿ ಟಿವಿಯ ದೃಶ್ಯಾವಳಿ ಬಹಿರಂಗಪಡಿಸಲಿ ಎಂದಿದ್ದಾರೆ.
ಗಾಯವಾದ ಪೊಲೀಸರ ಪಟ್ಟಿ ಕೊಡಲಿ
ಹಿಂಸಾಚಾರದಿಂದ ಡಿಸಿಪಿ ಅರುಣಾಂಶುಗಿರಿ ಸಹಿತ 33 ಮಂದಿ ಪೊಲೀಸರಿಗೆ ಅದರಲ್ಲೂ ಕೆಲವರಿಗೆ ಗಂಭೀರ ಗಾಯವಾಗಿದೆ ಎಂದು ಆಯುಕ್ತರು ಹೇಳಿಕೊಂಡಿದ್ದರು. (ಹೀಗೆ ಮಾಧ್ಯಮದ ಮುಂದೆ ಹೇಳಿಕೆ ಕೊಡುವಾಗ ಅರುಣಾಂಶುಗಿರಿ ಆಯುಕ್ತರ ಪಕ್ಕವೇ ನಿಂತಿದ್ದರು) ಗಾಯಗೊಂಡ ಪೊಲೀಸರು ಯಾರ್ಯಾರು ? ಗಂಭೀರ ಗಾಯಗೊಂಡವರು ಕೂಡ ವೆನ್ಲಾಕ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಮರಳಿದರೇ ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಪೊಲೀಸ್ ಆಯುಕ್ತರ ಮುಖವಾಡವನ್ನು ಮಾಜಿ ಸಿಎಂ ಕುಮಾರಸ್ವಾಮಿ ಮೊನ್ನೆಯೇ ಕಳಚಿದ್ದು, ಅದರಿಂದ ಪಾರಾಗಲಾಗದೆ ಇದೀಗ ಆಯುಕ್ತರು ಸುಳ್ಳನ್ನೇ ಸತ್ಯವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಆಯುಕ್ತರು ರಾಜಕಾರಣಿಗಳಂತೆ ಪ್ರತಿಕ್ರಿಯಿಸುವ ಬದಲು ಘಟನೆಯ ವಾಸ್ತವಾಂಶ ಜನರ ಮುಂದಿಡಲಿ ಎಂದು ಆಗ್ರಹಿಸಿದ್ದಾರೆ.
ಗೋಲಿಬಾರ್ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ಅಶ್ರಫ್
ಮಂಗಳೂರು ಹಿಂಸಾಚಾರದ ಸಂದರ್ಭ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಮಾಜಿ ಮೇಯರ್ ಕೆ. ಅಶ್ರಫ್ ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಮಾನವ ಹಕ್ಕು ಆಯೋಗವನ್ನು ಸಂಪರ್ಕಿಸಿ ಪೊಲೀಸ್ ಗೋಲಿಬಾರ್ ವಿರುದ್ಧ ದೂರು ನೀಡಿದ್ದಾರೆ.
ಗೋಲಿಬಾರ್ನಲ್ಲಿ ಮೃತ ಪಟ್ಟವರ ಮತ್ತು ಗಾಯಗೊಂಡವರ ವಿವರ ಸಹಿತ ಸುಮಾರು 380 ಪುಟಗಳ ಸಂಪೂರ್ಣ ಮಾಹಿತಿ, ಸಿಡಿ-ಫೋಟೋಗಳು, 32 ಎಫ್ಐಆರ್ಗಳ ಪ್ರತಿಯನ್ನು ನೀಡಿದರಲ್ಲದೆ, ಅಮಾಯಕರ ಮೇಲೆ ದಾಖಲಿಸಿದ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿದರು. ಈ ಸಂದರ್ಭ ನ್ಯಾಯವಾದಿಗಳಾದ ಲತೀಫ್ ಮತ್ತಿತರರು ಉಪಸ್ಥಿರಿದ್ದರು.
ಕುಮಾರಸ್ವಾಮಿ ಬಿಡುಗಡೆಗೊಳಿಸಿದ ‘ಸಿಡಿ’ ಸಂಪೂರ್ಣ: ವಾಯ್ಸ್ ಆಫ್ ಫೀಸ್
ಗೋಲಿಬಾರ್-ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಬಿಡುಗಡೆಗೊಳಿಸಿದ ‘ಸಿಡಿ’ ಸಂಪೂರ್ಣವಾಗಿದೆ ಎಂದು ಕುದ್ರೋಳಿಯ ವಾಯ್ಸೋ ಆಫ್ ಪೀಸ್ನ ಮುಖಂಡ ಮುಹಮ್ಮದ್ ಆಸಿಫ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ ಮುಹಮ್ಮದ್ ಶರೀಫ್ ‘ನಮ ಗೋಲಿಬಾರ್ ಮಲ್ಪುಗ’ (ನಾವು ಗೋಲಿಬಾರ್ ಮಾಡುವ), ಇನ್ಸ್ಪೆಕ್ಟರ್ ಶಾಂತರಾಮ ಕುಂದರ್ ‘ಸಾರ್ ಒಂದು ಹೋಗಲಿ, ಹತ್ತು ಗುಂಡು ಹೊಡೆದರೂ ಒಬ್ಬರೂ ಸಾಯಲಿಲ್ಲವಲ್ಲಾ...’ ಎಂದಿರುವುದು ಸುಳ್ಳೇ ?. ಮಾರ್ಕೆಟ್ ರಸ್ತೆಯ ಚಿನ್ನ ಮತ್ತು ಅಗರಬತ್ತಿ ಅಂಗಡಿಯ ಮಾಲಕರು ಮತ್ತವರ ಕೆಲಸದವರು ಮಾರಕ ಆಯುಧಗಳೊಂದಿಗೆ ದಾಂಧಲೆ ನಡೆಸಿದ ವೀಡಿಯೋ ಬಹಿರಂಗಪಡಿಸಿ, ಸಲಫಿ ಮಸೀದಿಗೆ ಕಲ್ಲೆಸೆದ ದೃಶ್ಯವನ್ನೂ ಬಹಿರಂಗಪಡಿಸಿ, ಗೋಲಿಬಾರ್ಗೆ ಬಲಿಯಾದ ಅಮಾಯಕರ ಮನೆಗೆ, ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರನ್ನು ತಾವು ಅಥವಾ ಜಿಲ್ಲಾಧಿಕಾರಿ ಭೇಟಿ ನೀಡಿದ ವೀಡಿಯೊವನ್ನಾದರೂ ಬಿಡುಗಡೆಗೊಳಿಸಿ ಎಂದು ಆಸಿಫ್ ಒತ್ತಾಯಿಸಿದ್ದಾರೆ.







