ಮುಝಫರ್ನಗರ ಗಲಭೆ: ಇನ್ನೂ ನಾಲ್ಕು ಪ್ರಕರಣಗಳ ಹಿಂದೆಗೆತಕ್ಕೆ ಉ.ಪ್ರ. ನಿರ್ಧಾರ

file photo
ಮುಝಾಫರ್ನಗರ್,ಜ.12: 2013ರ ಮುಝಫರ್ನಗರ ಗಲಭೆಗಳಿಗೆ ಸಂಬಂಧಿಸಿದ ಇನ್ನೂ ನಾಲ್ಕು ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಕ್ಕಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಉತ್ತರಪ್ರದೇಶ ಸರಕಾರವು ನಿರ್ಧರಿಸಿದೆ.
ಇದರೊಂದಿಗೆ ಮುಝಫರ್ನಗರ ನಗರ ಗಲಭೆಗೆ ಸಂಬಂಧಿಸಿ ಆದಿತ್ಯನಾಥ್ ಸರಕಾರವು ಹಿಂತೆಗೆದುಕೊಳ್ಳಲು ಬಯಸಿರುವ ಪ್ರಕರಣಗಳ ಸಂಖ್ಯೆ 80ಕ್ಕೇರಿದೆ. 2013ರ ಮುಝಫರ್ನಗರ ಗಲಭೆಗಳಿಗೆ ಸಂಬಂಧಿಸಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರಕಾರದ ಮನವಿಯ ಬಗ್ಗೆ ಅಂತಿಮ ನಿರ್ಧಾರವನ್ನು ನ್ಯಾಯಾಲಯ ಕೈಗೊಳ್ಳಲಿದೆ ಎಂದು ಜಿಲ್ಲಾಡಳಿತದ ನ್ಯಾಯವಾದಿ ದುಷ್ಯಂತ್ ತ್ಯಾಗಿ ತಿಳಿಸಿದ್ದಾರೆ.
ಮುಝಫರ್ ಗಲಭೆಗೆ ಸಂಬಂಧಿಸಿ ಇನ್ನೂ ನಾಲ್ಕು ಪ್ರಕರಣಗಳನ್ನು ಹಿಂತೆಗೆದುಕೊಳ್ಲುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರಕಾರವು ಮುಝಫರ್ನಗರ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದಾಗಿ ಉತ್ತರಪ್ರದೇಶದ ವಿಶೇಷ ಕಾನೂನು ಕಾರ್ಯದರ್ಶಿ ಅರುಣ್ ರಾಯ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ರಾಜ್ಯ ಸರಕಾರವು ಇಂತಹ 76ಕ್ಕೂ ಅಧಿಕ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.
ಆದಾಗ್ಯೂ ಮುಝಫರ್ನಗರ್ ಗಲಭೆಗೆ ಸಂಬಂಧಿಸಿದ ಬಿಜೆಪಿ ಶಾಸಕ ಸಂಗೀತ್ ಸೋಮ್, ಕೇಂದ್ರ ಸಚಿವ ಸಂಜೀವ್ ಕುಮಾರ್ ಬಲ್ಯಾನ್, ರಾಜ್ಯ ಸಂಪುಟ ಸಚಿವ ಸುರೇಶ್ ರಾಣಾ ಹಾಗೂ ಬಿಜೆಪಿಯ ಇತರ ಕೆಲವು ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ರಾಜ್ಯ ಸರಕಾರವು ಇನ್ನೂ ತೀರ್ಮಾನಿಸಿಲ್ಲವೆಂದು ತಿಳಿದುಬಂದಿದೆ.
2013ರ ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಮುಝಫರ್ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಕೋಮುಘರ್ಷಣೆಗಳಲ್ಲಿ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 40 ಸಾವಿರಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದರು.







