ಬಿಜೆಪಿ- ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಮತ್ತೆ ಒಗ್ಗೂಡಲಿದೆಯೇ ಜನತಾ ಪರಿವಾರ ?

ಮಹಿಮಾ ಪಟೇಲ್
ಬೆಂಗಳೂರು, ಜ.12: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ರಾಜ್ಯದಲ್ಲಿ ಜನತಾ ಪರಿವಾರವನ್ನು ಒಗ್ಗೂಡಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಮದು ತಿಳಿದು ಬಂದಿದೆ.
ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಜನರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಈ ವೇಳೆ ರಾಜಕೀಯ ಧ್ರುವೀಕರಣ ನಡೆಸಿ, ಜನತಾ ಪರಿವಾರವನ್ನು ಒಂದು ಮಾಡಲು ಮುಂದಾಗಿದ್ದಾರೆ. ಮಾಜಿ ಶಾಸಕ ಮಹಿಮಾ ಪಟೇಲ್ ನೇತೃತ್ವದಲ್ಲಿ ಈ ಪ್ರಯತ್ನ ನಡೆಯುತ್ತಿದೆ.
ಇತ್ತೀಚಿಗೆ ಸಭೆಯೊಂದು ನಡೆದಿದ್ದು, ಕೆಲವು ಠರಾವು ಪಾಸು ಮಾಡಿದೆ. ನಾಲ್ಕು ತಿಂಗಳಿಂದ ಆರಂಭವಾದ ಈ ಪ್ರಕ್ರಿಯೆಯು ನಿರಂತರವಾಗಿ ಕೆಲಸದಲ್ಲಿ ತಲ್ಲೀನವಾಗಿದೆ. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದಕ್ಕೆ ನೀರು ಹರಿಸಿದ್ದು, ಮತ್ತಷ್ಟು ಬಲ ಬಂದಿದೆ. ಅಲ್ಲದೆ, ಯಾವ ಯಾವ ಪಕ್ಷದಲ್ಲಿ ಸಮಾಜವಾದಿಗಳು ಇದ್ದಾರೆಯೋ ಅಲ್ಲಿಯೇ ಇದ್ದು ಸಮಾಜವಾದಿ ಚಿಂತನೆ ಬೆಳೆಸಲು ಸಾಧ್ಯವಿದೆಯಾ ಎಂಬುದು ಚರ್ಚೆಯಾಗುತ್ತಿದೆ ಎನ್ನಲಾಗಿದೆ.
ಬಿಹಾರ, ಒಡಿಶಾ, ಉತ್ತರ ಪ್ರದೇಶಗಳಲ್ಲಿ ಜನತಾ ಪರಿವಾರಕ್ಕೆ ದೊಡ್ಡ ಶಕ್ತಿಯಿದೆ. ರಾಜ್ಯದಲ್ಲಿಯೂ ಅದಕ್ಕೊಂದು ವೇದಿಕೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ನಡದಿದೆ. ಎಲ್ಲ ಸಮುದಾಯಗಳನ್ನು ಒಂದು ವೇದಿಕೆಯಡಿ ತಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಪರ್ಯಾಯವಾಗಿ ಜನತಾ ಪರಿವಾರ ಬೆಳೆಯುತ್ತದೆ ಎಂಬ ಆಶಯವನ್ನು ನಾಯಕರು ಹೊಂದಿದ್ದಾರೆ.
ಈ ಸಂಬಂಧ ಹೆಚ್ಚಿನ ಸಭೆ, ಸಮಾರಂಭಗಳನ್ನು ನಡೆಸಿ, ಚಿಂತನ-ಮಂಥನ ಮೂಲಕ ಜನರಿಗೆ ಮನವರಿಕೆ ಮಾಡಿಕೊಡಲು ಜನತಾ ಪರಿವಾರದ ಮುಖಂಡರು ನಿರ್ಧರಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗಳ ವೇಳೆಗೆ ಜನತಾ ಪರಿವಾರಕ್ಕೊಂದು ಸ್ಪಷ್ಟ ರೂಪ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಜನತಾ ಪರಿವಾರದ ಮುಖಂಡರು ಸೇರಿ ಜ.30 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಲು ಮುಂದಾಗಿದ್ದಾರೆ. ಇಲ್ಲಿ ಪ್ರಮುಖ ಪಳೆಯುಳಿಕೆಗಳು ಒಂದುಗೂಡಲು ವೇದಿಕೆ ಸಿದ್ಧಗೊಂಡಿದ್ದು, ಜೆಡಿಎಸ್ನಲ್ಲಿದ್ದ ಪ್ರಮುಖರೇ ಈಗ ಜನತಾ ಪರಿವಾರದ ವೇದಿಕೆಯ ಮುನ್ನೆಲೆಗೆ ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.







