ಸಂಪುಟ ವಿಸ್ತರಣೆ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದ ಸಿಎಂ ಯಡಿಯೂರಪ್ಪ

ಬೆಂಗಳೂರು, ಜ. 13: ನಾನು ವಿದೇಶಕ್ಕೆ ತೆರಳುವ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಭೇಟಿಗೆ ಇಂದೇ ಸಮಯ ನಿಗದಿಯಾಗಿತ್ತು. ಆದರೆ, ರಾಯಚೂರಿನಲ್ಲಿ ಹಾಲುಮತದವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಅಮಿತ್ ಶಾ ಅವರು ಸಿಗುವುದಾದರೆ ನಾಳೆ(ಜ.14) ನನ್ನೆಲ್ಲ ಕಾರ್ಯಕ್ರಮಗಳನ್ನು ಮುಂದೂಡಿ ಹೊಸದಿಲ್ಲಿಗೆ ತೆರಳಲಿದ್ದೇನೆ ಎಂದ ಅವರು, ಒಂದು ವೇಳೆ ನಾಳೆ ಶಾ ಅವರು ಸಿಗದೇ ಹೋದರೂ ಜ.17 ಮತ್ತು 18ಕ್ಕೆ ಆಗಮಿಸಲಿದ್ದು, ಈ ವೇಳೆ ಚರ್ಚಿಸಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ: ತಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರಿಗೆ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದ ಅವರು, ಹೊಸದಿಲ್ಲಿ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂಬುದು ಕೇವಲ ಊಹಾಪೋಹ. ಇದಕ್ಕೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೂರಕ್ಕೆ ನೂರು ಸಂಪುಟ ವಿಸ್ತರಣೆ ಆಗಲಿದೆ. ನಾನು ನಿಗದಿಯಂತೆ ವಿದೇಶಕ್ಕೆ ತೆರಳುವ ಮೊದಲೇ ರಾಜ್ಯ ಸಂಪುಟ ವಿಸ್ತರಣೆ ಮಾಡಲಿದ್ದು, ಆ ಬಳಿಕ ವಿದೇಶಕ್ಕೆ ತೆರಳುತ್ತೇನೆ ಎಂದು ಬಿಎಸ್‌ವೈ ಸ್ಪಷ್ಟನೆ ನೀಡಿದರು.







