ಎಂ.ಬಿ.ಪಾಟೀಲ್ ರಿಗೆ 'ಪರ್ಯಾವರಣ ರಕ್ಷಕ ಸಮ್ಮಾನ-2019' ಪ್ರಶಸ್ತಿ

ವಿಜಯಪುರ, ಜ.13: ರಾಜಸ್ಥಾನದ ತರುಣ್ ಭಾರತ ಸಂಘದಿಂದ ಪ್ರತಿ ವರ್ಷ ನೀಡುವ 'ಪರ್ಯಾವರಣ ರಕ್ಷಕ ಸಮ್ಮಾನ-2019' ಪ್ರಶಸ್ತಿ ಕರ್ನಾಟಕ ಸರ್ಕಾರದ ಮಾಜಿ ಜಲಸಂಪನ್ಮೂಲ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ರವರಿಗೆ ನೀಡಲಾಗಿದೆ.
ಎಂ.ಬಿ.ಪಾಟೀಲ್‍ರವರು ಪರಿಸರ ರಕ್ಷಣೆಯಲ್ಲಿ ಕೈಗೊಂಡಿರುವ ವಿವಿಧ ಕಾರ್ಯಗಳನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ನೀರಿನ ಗಾಂಧಿ ಎಂದೆ ಖ್ಯಾತರಾದ, ವರ್ಲ್ಡ್ ವಾಟರ್ ಪ್ರೈಸ್ ವಿಜೇತ ಡಾ.ರಾಜೇಂದ್ರ ಸಿಂಗ್ ಸ್ಥಾಪಿಸಿದ ತರುಣ್ ಭಾರತ ಸಂಘ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಬಿಕಾಂಪುರ ಗ್ರಾಮದಲ್ಲಿ ಪ್ರತಿ ವರ್ಷ ಸಂಕ್ರಾಂತಿಯ ಶುಭದಿನದಂದು ರಾಷ್ಟ್ರದಾದ್ಯಂತ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ.
ಮಕರ ಸಂಕ್ರಮಣ ದಿನ ದಿ.15ರಂದು ಬುಧವಾರ ಬೆಳಗ್ಗೆ ರಾಜಸ್ಥಾನದ ತರುಣ್ ಭಾರತ ಸಂಘ ಆಶ್ರಮದಲ್ಲಿ ಈ ಪ್ರಶಸ್ತಿಯನ್ನು ಮಹಾತ್ಮಾ ಗಾಂಧಿಯವರ ಮೊಮ್ಮಗ ಅರುಣ ಗಾಂಧಿ ನೀಡಲಿದ್ದು, ಎಂ.ಬಿ.ಪಾಟೀಲ್ ಉಪಸ್ಥಿತರಿದ್ದು, ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದಾದ್ಯಂತ ಕೈಗೊಂಡ ಕೆರೆ ತುಂಬುವ ಯೋಜನೆಗಳು ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಆ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಜೀವ ವೈವಿದ್ಯತೆ ಪುರ್ನಸ್ಥಾಪಿಸುವಲ್ಲಿ ಈ ಯೋಜನೆ ಯಶಸ್ಸು ಕಂಡಿದೆ. ಮತ್ತು ವಿಜಯಪುರ ನಗರ ಹೊರವಲಯದ ಭೂತನಾಳ ಹತ್ತಿರ 500 ಎಕರೆ ಪ್ರದೇಶದಲ್ಲಿ 60 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತಿರುವದನ್ನು ಪ್ರಶಸ್ತಿ ಆಯ್ಕೆ ಸಮಿತಿ ಪರಿಗಣಿಸಿದೆ.







