ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಎಸ್ಸಿ-ಎಸ್ಟಿ ನೌಕರರ ಮನವಿ

ಬೆಂಗಳೂರು, ಜ. 13: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿಗೆ ಶೇ.20ರಷ್ಟು ಹಾಗೂ ಎಸ್ಟಿಗೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕೆಂದು ಕೋರಿ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ, ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಸೋಮವಾರ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಹಿರಿಯ ಉಪಾಧ್ಯಕ್ಷ ಆರ್. ಮೋಹನ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್, ಕಾರ್ಯದರ್ಶಿ ಶಿವಕುಮಾರ್ ನೇತೃತ್ವದ ನಿಯೋಗ, ರಾಜ್ಯದಲ್ಲಿ ಎಸ್ಸಿ-ಎಸ್ಟಿಗಳ ಜನಸಂಖ್ಯೆ ಮತ್ತು ಮೀಸಲಾತಿ ಹೆಚ್ಚಿಸುವ ಅನಿವಾರ್ಯಯ ಬಗ್ಗೆ ಅಂಕಿ-ಅಂಶಗಳ ಸಹಿತ ಸುದೀರ್ಘ ಮನವಿ ಪತ್ರವನ್ನು ಸಲ್ಲಿಸಿತು.
ಪ್ರಾತಿನಿಧ್ಯದ ಕೊರತೆ: ಸರಕಾರದ ವಿವಿಧ ಇಲಾಖೆಗಳಲ್ಲಿ 7,45,593 ಹುದ್ದೆ ಮಂಜೂರಾಗಿದ್ದು, ಆಪೈಕಿ 5,23,574 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದ 2,22,019 ಹುದ್ದೆಗಳು ಖಾಲಿ ಇವೆ. ಮಂಜೂರಾದ ಹುದ್ದೆಗಳನ್ನು ಪರಿಗಣಿಸಿದಲ್ಲಿ ಎಸ್ಸಿ- ಶೇ.10.65ರಷ್ಟು, ಎಸ್ಟಿ-ಶೇ.2.34ರಷ್ಟು ಅಭ್ಯರ್ಥಿಗಳು ಮಾತ್ರ ಇರುವುದರಿಂದ ಪ್ರಾತಿನಿಧ್ಯದ ಕೊರತೆ ರಾಜ್ಯ ಸರಕಾರದ ಹುದ್ದೆಗಳಲ್ಲಿ ಕಂಡುಬರುತ್ತದೆ.
ಇಂತಹ ದುಸ್ಥಿತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಎಸ್ಸಿ-ಎಸ್ಟಿ ಸಮುದಾಯಗಳು ಅತ್ಯಂತ ಹಿಂದುಳಿದಿವೆ. ಈ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಾದರೆ ಅವರಿಗೆ ಸಂವಿಧಾನಾತ್ಮಕವಾಗಿ ಸಾಮಾಜಿಕ ನ್ಯಾಯ ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ಆಗ್ರಹಿಸಲಾಗಿದೆ.







