ಮಾ.31ಕ್ಕೆ ಇಲಾಖೆಯಿಂದ ‘ಸಹಾಯವಾಣಿ’: ಸಚಿವ ಸುರೇಶ್ ಕುಮಾರ್
'ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಬಳಕೆಗೆ ನಿರ್ಬಂಧ'

ಉಡುಪಿ, ಜ.13: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರಿಗೆ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಹೇಳಿಕೊಳ್ಳಲು, ಕುಂದುಕೊರತೆಗಳನ್ನು ತಿಳಿಸಲು ದಿನದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಟೋಲ್‌ಫ್ರಿ ನಂ.ನ ‘ಸಹಾಯವಾಣಿ’ ಯನ್ನು ಇದೇ ಮಾ.31ರಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಕೋಟ ಸಮೀಪದ ಮಣೂರು-ಪಡುಕೆರೆ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಶಾಲಾ ಹಬ್ಬ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಹಾಗೂ ಶಾಲೆಯ ಸಾರ್ಥಕ 75 ಶೈಕ್ಷಣಿಕ ವಸಂತಗಳ ಸಂಭ್ರಮಾಚರಣೆಯನ್ನು ಶಾಲೆಯ ಪುಟಾಣಿ ಮಕ್ಕಳೊಂದಿಗೆ ಸೇರಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಉಚಿತ ಸಹಾಯವಾಣಿ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿರುವ ಸಮಸ್ಯೆ, ಆಗಬೇಕಾಗಿರುವ ಸುಧಾರಣೆಗಳು, ಸಲಹೆ-ಸೂಚನೆಗಳನ್ನು ನೀಡಬಹು ದಾಗಿದ್ದು, ಹೆತ್ತವರು-ಮಕ್ಕಳು ತಮ್ಮ ದೂರು, ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಬಹುದು ಎಂದರು.
ಅದೇ ರೀತಿ ಶಿಕ್ಷಣ ಇಲಾಖೆಯಿಂದ ಹೊಸ ಆ್ಯಪ್ ಒಂದನ್ನು ಬಿಡುಗಡೆ ಗೊಳಿಸಲಾಗುತಿದ್ದು, ಇದರಲ್ಲಿ ಸಾರ್ವಜನಿಕರು, ಶಾಲೆಯ ಹಳೆವಿದ್ಯಾರ್ಥಿಗಳು ರಾಜ್ಯದ ಯಾವುದೇ ಸರಕಾರಿ ಶಾಲೆಗೆ ಯಾವುದೇ ರೂಪದಲ್ಲಿ ಸಹಾಯ ಮಾಡಲು ಬಯಸಿದರೆ, ಶಾಲೆಯ ಅಭಿವೃದ್ಧಿಗೆ ತಮ್ಮಿಂದಾದ ಕೊಡುಗೆ ನೀಡಲು ಬಯಸಿದರೆ, ಆ್ಯಪ್ ಮೂಲಕ ತಿಳಿಸಬಹುದಾಗಿದ್ದು, ಅವರಿಗೆ ಈ ಆ್ಯಪ್ ಮೂಲಕವೇ ಅನುಮತಿ ನೀಡಲಾಗುತ್ತದೆ. ಜನರ ನೆರವು ಧನಸಹಾಯದ ರೂಪದಲ್ಲಿರಬಹುದು ಅಥವಾ ಮಕ್ಕಳಿಗೆ ಉಚಿತವಾಗಿ ಕಲಿಸುವ ರೂಪದಲ್ಲೂ ಇರಬಹುದು ಎಂದು ಸಚಿವರು ಹೇಳಿದರು.
ತಿಂಗಳಲ್ಲಿ 2 ‘ಬ್ಯಾಗ್‌ಲೆಸ್ ಡೇ’: ಮುಂದಿನ ಶೈಕ್ಷಣಿಕ ವರ್ಷದಿಂದ ತಿಂಗಳಲ್ಲಿ ಎರಡು ದಿನಗಳನ್ನು ‘ಬ್ಯಾಗ್‌ಲೆಸ್’ ದಿನವನ್ನಾಗಿ ಘೋಷಿಸ ಲಾಗುವುದು. ಆ ದಿನಗಳಂದು ವಿದ್ಯಾರ್ಥಿಗಳಿಗೆ ಪಾಠ-ಪಠ್ಯಪುಸ್ತಕಗಳಿಲ್ಲದೇ ತರಗತಿಗಳನ್ನು ನಡೆಸಿ, ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ನುಡಿದರು.
ಅದೇ ರೀತಿ ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳಲ್ಲಿ ಮಕ್ಕಳ ಬ್ಯಾಗ್ ತೂಕವನ್ನು ಇಳಿಸಲು ಸಹ ಕ್ರಮ ತೆಗೆದುಕೊಳ್ಳಲಾಗುತ್ತದೆ. ಖ್ಯಾತ ಸಾಹಿತಿ ದಿ.ಆರ್.ಕೆ.ನಾರಾಯಣ್ ಸೇರಿದಂತೆ ಸಾಕಷ್ಟು ಮಂದಿ ಮಕ್ಕಳು ಹೊರುತ್ತಿರುವ ಪುಸ್ತಕಗಳ ತೂಕದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಈ ತೂಕ ಕಡಿಮೆಗೊಳಿಸಲು ್ರಯತ್ನ ನಡೆಸುವುದಾಗಿ ತಿಳಿಸಿದರು.
ಶಾಲಾ ಶಿಕ್ಷಕ-ಶಿಕ್ಷಕಿಯರು ‘ತಾಯಿ ಹೃದಯ’ ಹೊಂದಿರಬೇಕು ಎಂದು ಕಿವಿಮಾತು ಹೇಳಿದ ಸಚಿವ ಸುರೇಶ್‌ಕುಮಾರ್, ಆದರೆ ಇತ್ತೀಚೆಗೆ ಇದಕ್ಕೆ ವ್ಯತಿರಿಕ್ತವಾದ ನಡತೆ ಅವರಿಂದ ಕಂಡುಬರುತ್ತಿದೆ ಎಂದರು. ಇತ್ತೀಚೆಗೆ ‘ಪಕ್ಕೆಲುಬು’ ಎಂಬ ಶಬ್ದವನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ ಪುಟ್ಟ ಬಾಲಕನೊಬ್ಬನ ಪ್ರಯತ್ನವನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಶಾಲಾ ಶಿಕ್ಷಕರೊಬ್ಬರ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಾ ಅವರು ಹೇಳಿದರು.
ಇದೀಗ ಹಗರಿಬೊಮ್ಮನ ಹಳ್ಳಿಯ ಈ ಶಿಕ್ಷಕರನ್ನು ಪತ್ತೆ ಹಚ್ಚಿ ಆತನನ್ನು ಸಸ್ಪೆಂಡ್ ಮಾಡಲಾಗಿದೆ.ಆದರೆ ಈ ಕ್ರಮಕ್ಕೆ ಊರ ಕೆಲವರಿಂದ ಪ್ರತಿರೋಧ ಬಂದಿದೆ ಎಂದರು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕ-ಶಿಕ್ಷಕಿಯರು ಶಾಲಾ ಅವಧಿಯಲ್ಲಿ ಮೊಬೈಲ್ ಬಳಸುವುದನ್ನು, ವಿಡಿಯೋ ಚಿತ್ರೀಕರಿಸುವುದನ್ನು ನಿಷೇಧಿಸಲಾಗುವುದು ಎಂದು ಸಚಿವರು ನುಡಿದರು.
ಯಾವ ಸಮಾಜ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವುದೋ ಆ ಸಮಾಜ ಅತ್ಯಂತ ಆರೋಗ್ಯಕರ ಸಮಾಜವಾಗಿರುತ್ತದೆ. ವೌಲ್ಯಗಳಿಂದ ಕೂಡಿದ ಗುಣಮಟ್ಟದ ಶಿಕ್ಷಣ ನಮಗಿಂದು ಬೇಕಾಗಿದೆ. ಶಾಲಾ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಿ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದರೆ ಶಿಕ್ಷಣದ ನಿಜವಾದ ಉದ್ದೇಶ ಈಡೇರುತ್ತದೆ ಎಂದವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದ ಶಾಲೆಯ ಮೂವರು ಕ್ರೀಡಾಪಟುಗಳಾದ ಸಾತ್ವಿಕ್, ದಿಲೀಪ್ ಹಾಗೂ ಅಬ್ದುಲ್ ಹಕೀಮ್ ಇವರನ್ನು ಸಚಿವರು ಸನ್ಮಾನಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋಟ ಗ್ರಾಪಂ ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್, ಡಿಡಿಪಿಐ ಶೇಷಶಯನ ಕಾರಿಂಜ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್‌ಸಿ.ಕುಂದರ್, ಸರಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸತೀಶ್ ಐತಾಳ್, ಸರಕಾರಿಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಜಯಂತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಪ್ರಕಾಶ್ ತೋಳಾರ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಎಚ್.ಕುಂದರ್ ಸ್ವಾಗತಿಸಿದರೆ, ಆನಂದ ಸಿ.ಕುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪಡುಕೆರೆಗೆ ಕರ್ನಾಟಕ್ ಪಬ್ಲಿಕ್ ಸ್ಕೂಲ್ ಮಂಜೂರು
ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ದಾನಿ ಆನಂದ ಸಿ.ಕುಂದರ್ ಅವರ 1943ರಲ್ಲಿ ಮೀನುಗಾರ ಸಮುದಾಯದಿಂದ ಪ್ರಾರಂಭಗೊಂಡ ಈ ಶಾಲೆ ಇಂದು ಪದವಿ ಶಿಕ್ಷಣದವರೆಗೆ ಸುಮಾರು 950 ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುತ್ತಿದೆ. ಆದರೆ ಅಂಗನವಾಡಿಯಿಂದ ಪದವಿವರೆಗೆ ಇಲ್ಲಿ ಕಲಿಕೆ ಸಾಧ್ಯವಾದರೂ ಪದವಿ ಪೂರ್ವ ಶಿಕ್ಷಣಕ್ಕೆ ಇಲ್ಲಿ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಹೇಳಿ ಈ ಬಗ್ಗೆ ಮನವಿ ಅರ್ಪಿಸಿದರು.
ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸುರೇಶ್ ಕುಮಾರ್, ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ, ಪ್ರಾಥಮಿಕ ಹಂತದಿಂದ ಪದವಿ ಪೂರ್ವದವರೆಗಿನ ಶಿಕ್ಷಣ ಒಂದೇ ಆವರಣದಲ್ಲಿ ದೊರೆಯಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಕಳೆದ ವರ್ಷ ಪ್ರಾರಂಭಿಸಲಾಗಿದೆ.
ಕಳೆದ ವರ್ಷ ರಾಜ್ಯದಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸ ಲಾಗಿದೆ. ಇನ್ನಷ್ಟು ಕೆಪಿಎಸ್‌ಗೆ ಬೇಡಿಕೆ ಇದ್ದು, ಮಣೂರು ಪಡುಕೆರೆ ಯಲ್ಲಿ ಅಂಗನವಾಡಿಯಿಂದ ಪದವಿವರೆಗೆ ಶಿಕ್ಷಣಕ್ಕೆ ಅವಕಾಶವಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಮಣೂರು- ಪಡುಕೆರೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ್ನು ಮಂಜೂರು ಮಾಡಿ ಪದವಿ ಪೂರ್ವ ಕಾಲೇಜಿಗೆ ಅವಕಾಶ ಮಾಡಿಕೊಡಲಾಗುವುದು. ಕೊಠಡಿ ಸೇರಿದಂತೆ ಕಲಿಕೆಗೆ ಬೇಕಾದ ಎಲ್ಲಾ ಮೂಲಭೂತ ಸೌಲ್ಯಗಳು ಇಲ್ಲಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲು ಅನುಮತಿ ನೀಡಲಾಗುುದು ಎಂದು ಸಚಿವರು ಹೇಳಿದರು.














