ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳ ಬಂಧನಕ್ಕೆ ಪಿಎಫ್‌ಐ ಒತ್ತಾಯ
ಮಂಗಳೂರು, ಜ.13: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ದೇರಳಕಟ್ಟೆಯಲ್ಲಿ ರವಿವಾರ ನಡೆದ ಪ್ರತಿಭಟನೆಯ ಬಳಿಕ ಕುರ್ಚಿಗಳನ್ನು ತುಂಬಿದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಕೃತ್ಯವನ್ನು ಖಂಡಿಸಿರುವ ಪಿಎಫ್‌ಐ ರಾಜ್ಯಸಮಿತಿ ಸದಸ್ಯ ಎ.ಕೆ. ಅಶ್ರಫ್ ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇರಳಕಟ್ಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅಪಾರ ಸಂಖ್ಯೆಯ ಸರ್ವಧರ್ಮೀಯ ಸಮುದಾಯದ ಜನರು ಸೇರಿದ್ದರು. ಈ ಜನಸ್ತೋಮ ವನ್ನು ಕಂಡು ಸಹಿಸದ ಕಿಡಿಗೇಡಿಗಳು ಜಿಲ್ಲೆಯ ಶಾಂತಿ ಕದಡುವ ಪ್ರಯತ್ನವಾಗಿ ಮಧ್ಯರಾತ್ರಿ ವೇಳೆ ಸಭೆಗೆ ತಂದ ಕುರ್ಚಿ ತುಂಬಿದ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಿಂದ ಲಾರಿಯೊಂದಿಗೆ ತುಂಬಿಸಿದ ಕುರ್ಚಿ ಮತ್ತು ಆಸನ ಸಲಕರಣೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂ. ಸೊತ್ತು ನಾಶವಾಗಿದೆ.
ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ ಗೋಲಿಬಾರ್, ಕರ್ಫ್ಯೂನಿಂದ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಈ ಘಟನೆಯು ಮನಸ್ಸಿನಿಂದ ಮಾಸುವ ಮುನ್ನವೇ ದುಷ್ಕರ್ಮಿಗಳು ಮತ್ತೆ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಗಲಭೆಯ ವಾತಾವರಣ ಸೃಷ್ಟಿಸಿ ಶಾಂತಿ ಕದಡುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಅಶ್ರಫ್ ಒತ್ತಾಯಿಸಿದ್ದಾರೆ.





