ಅಂಬೇಡ್ಕರ್ ನಿಗಮದಲ್ಲಿ ಹಗರಣ: ಸಿಓಡಿಗೆ ಒಪ್ಪಿಸಲು ಆಗ್ರಹಿಸಿ ಧರಣಿ

ಉಡುಪಿ, ಜ.13: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿರುವ ಹಗರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ, ಆಯಾ ಜಿಲ್ಲೆಯ ಫಲಾನುಭವಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಜಿಪಂ ಸಿಇಓ ಅವರಿಗೆ ಅಧಿಕಾರ ನೀಡುವಂತೆ ಆಗ್ರಹಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಪ್ರತಿವರ್ಷ ಒಂದು ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದು, ಸುಮಾರು 10ವರ್ಷಗಳಿಂದಲೂ ಅಧಿಕಾರಿಗಳು ಆಯಾ ಜಿಲ್ಲಾ ನಿಗಮಗಳಿಗೆ ಸಮರ್ಪಕ ಅನುದಾನ ನೀಡದೆ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಪೇತ್ರಿ ದೂರಿದರು.
ಈ ಅನುದಾನದಲ್ಲಿ ಉಡುಪಿ ಜಿಲ್ಲೆಗೆ 15ಕೋಟಿ ರೂ. ಅನುದಾನ ನೀಡ ಬೇಕು. ಆಯಾ ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆಯನ್ನು ಈ ಹಿಂದಿನಂತೆ ಸಿಇಓ ಅಧ್ಯಕ್ಷತೆಯಲ್ಲೇ ಮಾಡಬೇಕು. ಜಿಲ್ಲೆಯಲ್ಲಿ ಐದು ಕೇಂದ್ರಗಳಿದ್ದು, ತಲಾ 10ರಂತೆ 50 ಜನ ಫಲಾನುಭವಿಗಳಿಗೆ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ ಯಲ್ಲಿ ಸಾಲ ಸೌಲಭ್ಯ ನೀಡಬೇಕು. ಭೂ ಒಡೆತನದ ಯೋಜನೆ ಕನಿಷ್ಠ ಎರಡು ಎಕರೆ ಕೃಷಿ ಭೂಮಿಯನ್ನು ಸಾಲ ರಹಿತವಾಗಿ ಸಂಪೂರ್ಣ ಸಹಾಯಧನ ದೊಂದಿಗೆ ನಿಗಮದಿಂದಲೇ ನೀಡಬೇಕು ಎಂದು ಆಗ್ರಹಿಸಿದರು.
ನಿಗಮದ ಉಡುಪಿ ಜಿಲ್ಲಾ ಕಚೇರಿಯಲ್ಲಿ ಸುಮಾರು ಐದು ವರ್ಷಗಳಿಂದ ವ್ಯವಸ್ಥಾಪಕರು ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಕೂಡಲೇ ಕನಿಷ್ಠ ಮೂರು ತಾಲೂಕು ಅಧಿಕಾರಿಗಳನ್ನು ನೇಮಕ ಮಾಡಬೇಕು. ಹೊರಗುತ್ತಿಗೆ ನೌಕರರನ್ನು ವಜಾ ಮಾಡಿ ಸರಕಾರ ನೇರ ನೇಮಕಾತಿ ಮೂಲಕ ನಿಗಮದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘಟನಾ ಕಾರ್ಯದರ್ಶಿ ಸುಧಾಕರ ಸೂರ್ಗೋಳಿ, ಕೋಶಾಧಿಕಾರಿ ಮಂಜುನಾಥ ಮಧುವನ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ, ಗಜೇಂದ್ರ ಕಾರ್ಕಳ, ಪ್ರವೀಣ್ ಶಿರಿಯಾರ, ಗೋಪಾಲ ಮಿಯ್ಯೋರು, ಶ್ರೀನಿವಾಸ ತೋನ್ನಾರ್ಸೆ, ಸುಬ್ರಹ್ಮಣ್ಯ, ರಮೇಶ್ ಬಿರ್ತಿ, ವಾರಿಜಾ ಶೀನಾ, ಶೀನ ಹೆರ್ಮಂಡು, ಸತೀಶ್ ಜನ್ನಾಡಿ, ಇಂದಿರಾ ಬೈಕಾಡಿ, ಬೀಬಿ ಅಜೆಕಾರ್, ಪುಷ್ಪಾ, ಗುಣಕರ, ಬೇಬಿ ಉಪಸ್ಥಿತರಿದ್ದರು.







