ಉಡುಪಿ: ಪಶುವೈದ್ಯರಿಗೆ ತಾಂತ್ರಿಕ ಕಾರ್ಯಾಗಾರ

ಉಡುಪಿ, ಜ.13: ಉಡುಪಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶನಿವಾರ ಪಶುವೈದ್ಯರಿಗೆ ಒಂದು ದಿನದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ ನಡೆಯಿತು.
ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಶುವೈದ್ಯ ವೃತ್ತಿಯಲ್ಲಿ ರೈತಾಪಿ ಜನರಿಗೆ ಶ್ರದ್ದೆಯಿಂದ ಸೇವೆ ಸಲ್ಲಿಸುವಂತೆ ಸೂಚಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಪಶು ಪಾಲನಾ ಇಲಾಖೆಯ ವಿವಿಧ ಸಮಸ್ಯೆಗಳ ಬಗ್ಗೆ ವಿಶೇಷ ಗಮನಹರಿಸಿ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದೆಂದು ತಿಳಿಸಿದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಹರೀಶ್ ತಾಮಣ್‌ಕರ್ ಸ್ವಾಗತಿಸಿದರು. ಮಂಗಳೂರಿನ ಖ್ಯಾತ ಖಾಸಗಿ ಪಶುವೈದ್ಯ ಡಾ. ಮನೋಹರ ಉಪಾಧ್ಯ ಜಾನುವಾರುಗಳಲ್ಲಿ ಹೋಮಿಯೋಪತಿ ಚಿಕಿತ್ಸೆ ಬಗ್ಗೆ ಪಶುವೈದ್ಯರಿಗೆ ವಿವರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭ ಜಿಲ್ಲೆಯ ಆಯ್ದ ಮೂವರು ಯಶಸ್ವಿ ಹೈನುಗಾರಿಕೆ /ಹಂದಿ ಸಾಕಾಣಿಕೆ / ಆಡು ಸಾಕಾಣಿಕೆ ರೈತರನ್ನು ಗುರುತಿಸಿ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಹಿರಿಯಡ್ಕ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ಉದಯಕುಮಾ್ ಶೆಟ್ಟಿ ವಂದಿಸಿದರು.







