ಪಂಜಾಬ್ ವಿರುದ್ಧ ಕೇರಳಕ್ಕೆ ರೋಚಕ ಜಯ
ಜಲಜ್ ಸಕ್ಸೇನ ಏಕಾಂಗಿ ಹೋರಾಟ
ತಿರುವನಂತಪುರ, ಜ.13: ಕೆಲ ಕ್ಷಣ ಆತಂಕ ಎದುರಿಸಿದ ಆತಿಥೇಯ ಕೇರಳ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ 21 ರನ್‌ಗಳ ರೋಚಕ ಜಯ ದಾಖಲಿಸಿತು. ಮೂರನೇ ದಿನದಾಟವಾದ ಸೋಮವಾರ 33ರ ಹರೆಯದ ಜಲಜ್ ಸಕ್ಸೇನ 23.1 ಓವರ್‌ಗಳ ಬೌಲಿಂಗ್ ನಡೆಸಿ 51 ರನ್‌ಗೆ ಏಳು ವಿಕೆಟ್‌ಗಳನ್ನು ಉಡಾಯಿಸಿ ಕೇರಳಕ್ಕೆ ಏಕಾಂಗಿಯಾಗಿ ಗೆಲುವು ತಂದರು. ಸಕ್ಸೇನ ಸ್ಪಿನ್ ಮೋಡಿಗೆ ತತ್ತರಿಸಿದ ಪಂಜಾಬ್ 2ನೇ ಇನಿಂಗ್ಸ್‌ನಲ್ಲಿ ಕೇವಲ 124 ರನ್‌ಗೆ ಆಲೌಟಾಯಿತು. ಜಲಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20ನೇ ಬಾರಿ ಕಬಳಿಸಿದ ಐದು ವಿಕೆಟ್ ಗೊಂಚಲು ನೆರವಿನಿಂದ ಕೇರಳ ಈ ಋತುವಿನಲ್ಲಿ ಮೊದಲ ಜಯ ದಾಖಲಿಸಿತು. ಬಲಿಷ್ಠ ತಂಡದ ವಿರುದ್ಧವೇ ಗೆಲುವಿನ ನಗೆ ಬೀರಿತು. ತನ್ನ ಎರಡನೇ ಇನಿಂಗ್ಸ್‌ನಲ್ಲಿ 136 ರನ್‌ಗೆ ಆಲೌಟಾಗಿದ್ದ ಕೇರಳ ತಂಡ ಪಂಜಾಬ್‌ಗೆ ನಾಲ್ಕನೇ ಇನಿಂಗ್ಸ್‌ನಲ್ಲಿ ಗೆಲ್ಲಲು 146 ರನ್ ಗುರಿ ನೀಡಿತು. ರೋಹನ್ ಮರ್ವಾಹ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಜಲಜ್, ಪಂಜಾಬ್‌ಗೆ ಮೊದಲ ಆಘಾತ ನೀಡಿದರು. ಆರನೇ ಓವರ್‌ನಲ್ಲಿ ಪ್ರಮುಖ ಆಟಗಾರ ಪಂಜಾಬ್ ನಾಯಕ ಮನ್‌ದೀಪ್ ಸಿಂಗ್(10) ವಿಕೆಟನ್ನು ಉರುಳಿಸಿದ ಜಲಜ್ ಪಂದ್ಯವನ್ನು ಕೇರಳದತ್ತ ವಾಲಿಸಿದರು. ಪಂಜಾಬ್ ತನ್ನ ನಾಯಕನನ್ನು ಕಳೆದುಕೊಂಡ ಬಳಿಕ ಕುಸಿತ ಕಾಣಲಾರಂಭಿಸಿದ್ದು, 89 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತು. 9ನೇ ವಿಕೆಟ್ ಜೊತೆಯಾಟದಲ್ಲಿ 33 ರನ್ ಕಲೆ ಹಾಕಿದ ಮಾಯಾಂಕ್ ಮರ್ಕಂಡೆ ಹಾಗೂ ಸಿದ್ದಾರ್ಥ್ ಕೌಲ್ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಮರ್ಕಂಡೆ(23) ವಿಕೆಟನ್ನು ಕಬಳಿಸಿದ ಜಲಜ್ ಪಂಜಾಬ್ ಹೋರಾಟಕ್ಕೆ ತೆರೆ ಎಳೆದರು. ಎರಡು ಇನಿಂಗ್ಸ್ ನಲ್ಲಿ ಔಟಾಗದೆ ಉಳಿದಿದ್ದ ಸಲ್ಮಾನ್ ನಿಸಾರ್ ಪಂದ್ಯಶೇಷ್ಠ ಪ್ರಶಸ್ತಿ ಪಡೆದರು.





