ಸಿಎಎ ಪ್ರತಿಭಟನೆಗಳ ಬಗ್ಗೆ ವಿಪಕ್ಷಗಳ ಸಭೆ: ಟಿಎಂಸಿ, ಆಪ್, ಬಿಎಸ್ಪಿ ಗೈರು

ಹೊಸದಿಲ್ಲಿ, ಜ.13: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಯೋಜಿಸಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಪೌರತ್ವ ವಿರೋಧಿ ಪ್ರತಿಭಟನೆ ಹಾಗೂ ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ಘಟನೆಯ ಬಳಿಕ ದೇಶದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
20 ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರೆ ಆಮ್ ಆದ್ಮಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಸಭೆಗೆ ಗೈರು ಹಾಜರಾಗಿದ್ದವು. ಎನ್‌ಸಿಪಿ ಮುಖಂಡ ಶರದ್ ಪವಾರ್, ಎಡಪಕ್ಷಗಳ ಮುಖಂಡರಾದ ಸೀತಾರಾಮ ಯೆಚೂರಿ ಮತ್ತು ಡಿ ರಾಜ, ಜೆಎಂಎಂ ಮುಖಂಡ ಮತ್ತು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಸೊರೇನ್, ಎಲ್‌ಜೆಡಿ ಮುಖ್ಯಸ್ಥ ಶರದ್ ಯಾದವ್, ಆರ್‌ಎಲ್‌ಎಸ್‌ಪಿ ಮುಖಂಡ ಉಪೇಂದ್ರ ಕುಶ್ವಾಹ, ಆರ್‌ಜೆಡಿ ಮುಖಂಡ ಮನೋಜ್ ಝಾ, ಎನ್‌ಸಿಪಿ ಮುಖಂಡ ಹಸ್ನೈನ್ ಮಸೂದಿ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಗುಲಾಂ ನಬಿ ಆಝಾದ್, ಅಹ್ಮದ್ ಪಟೇಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಮುಂದುವರಿಸಲು ಬೆಂಬಲ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.







