ನ್ಯೂಝಿಲ್ಯಾಂಡ್ ವಿರುದ್ಧದ ಟ್ವೆಂಟಿ-20 ಸರಣಿ: ಟೀಮ್ ಇಂಡಿಯಾ ಪ್ರಕಟ
ತಂಡಕ್ಕೆ ವಾಪಸಾದ ರೋಹಿತ್, ಸ್ಥಾನ ತೆರವುಗೊಳಿಸಿದ ಸಂಜು

ಮುಂಬೈ, ಜ.13: ನ್ಯೂಝಿಲ್ಯಾಂಡ್ ವಿರುದ್ಧ ಟ್ವೆಂಟಿ-20 ಪ್ರವಾಸ ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ರೋಹಿತ್ ಶರ್ಮಾ ತಂಡಕ್ಕೆ ವಾಪಸಾಗಿದ್ದಾರೆ. ಇದೇ ವೇಳೆ ಆಯ್ಕೆ ಸಮಿತಿಯು ಕೇರಳದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈ ಬಿಟ್ಟಿದೆ. ನ್ಯೂಝಿಲ್ಯಾಂಡ್‌ಗೆ ತೆರಳಲಿರುವ ಭಾರತದ 16 ಮಂದಿ ಸದಸ್ಯರ ಟ್ವೆಂಟಿ-20 ತಂಡಕ್ಕೆ ವೇಗಿ ಮುಹಮ್ಮದ್ ಶಮಿ ಮರಳಿದ್ದಾರೆ. ಶಮಿ ಮತ್ತು ರೋಹಿತ್‌ಗೆ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಸ್ಯಾಮ್ಸನ್ ಪುಣೆಯಲ್ಲಿ ಶ್ರೀಲಂಕಾ ವಿರುದ್ಧ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಆಡುವ ಅವಕಾಶ ಪಡೆದು ಕೇವಲ 6 ರನ್ ಗಳಿಸಿದ್ದರು. ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಲಂಕಾ ವಿರುದ್ಧ ಆಡಿದ್ದ ತಂಡದಲ್ಲಿದ್ದ ಬಹುತೇಕ ಆಟಗಾರರು ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯು ಜನವರಿ 24ರಂದು ಆಕ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ.
ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ಕಿವೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಪ್ರಕಟಿಸಿಲ್ಲ. ‘‘ರೋಹಿತ್ ಶರ್ಮಾ ತಂಡಕ್ಕೆ ವಾಪಸಾಗಿದ್ದಾರೆ. ಅವರಿಗೆ ಸಂಜು ಸ್ಯಾಮ್ಸನ್ ಸ್ಥಾನ ತೆರವುಗೊಳಿಸಿದ್ದಾರೆ. ಸ್ಯಾಮ್ಸನ್ ‘ಎ’ ತಂಡದೊಂದಿಗೆ ಈಗಾಗಲೇ ನ್ಯೂಝಿಲ್ಯಾಂಡ್‌ನಲ್ಲಿದ್ದಾರೆ. ನಮ್ಮ ಟ್ವೆಂಟಿ-20 ತಂಡದಲ್ಲಿ ಯಾವುದೇ ಆಶ್ಚರ್ಯಗಳಿಲ್ಲ. ಉಳಿದ ಎಲ್ಲ ಆಟಗಾರರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ಮತ್ತು ಏಕದಿನ ತಂಡವನ್ನು ಘೋಷಿಸಲಾಗಿಲ್ಲ ಮತ್ತು ಹಾರ್ದಿಕ್ ಪಾಂಡ್ಯ ಅವರ ಇತ್ತೀಚಿನ ಫಿಟ್ನೆಸ್ ಸಮಸ್ಯೆ ಇದಕ್ಕೆ ಕಾರಣ ಎಂದು ನಂಬಲಾಗಿದೆ. ನ್ಯೂಝಿಲ್ಯಾಂಡ್ ಪ್ರವಾಸಕ್ಕಾಗಿ ಟ್ವೆಂಟಿ-20 ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮನೀಷ್ ಪಾಂಡೆ, ಶಿವಂ ದುಬೆ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ , ನವದೀಪ ಸೈನಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ ಮತ್ತು ಮುಹಮ್ಮದ್ ಶಮಿ







