ಎರಡನೇ ಸುತ್ತಿನಲ್ಲಿ ಸೈನಾ, ಸಿಂಧು ಸೆಣಸಾಟ?
ನಾಳೆಯಿಂದ ಇಂಡೋನೇಶ್ಯ ಮಾಸ್ಟರ್ಸ್
ಜಕಾರ್ತ, ಜ.13: ಇಂಡೋನೇಶ್ಯ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳವಾರ ಇಲ್ಲಿ ಆರಂಭವಾಗಲಿದ್ದು ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ದ್ವಿತೀಯ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ವಿಶ್ವ ಚಾಂಪಿಯನ್ ಸಿಂಧು ಹಾಗೂ ಹಾಲಿ ಚಾಂಪಿಯನ್ ಸೈನಾ ವರ್ಷದ ಮೊದಲ ಟೂರ್ನಿ ಮಲೇಶ್ಯ ಮಾಸ್ಟರ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನದ ನಿರೀಕ್ಷೆಯಲ್ಲಿದ್ದರು. ಆದರೆ, ನೇರ ಗೇಮ್‌ಗಳ ಅಂತರದಿಂದ ಸೋತಿರುವ ಈ ಇಬ್ಬರ ಅಭಿಯಾನ ಕೂಟದ ಕ್ವಾರ್ಟರ್ ಫೈನಲ್‌ನಲ್ಲೇ ಅಂತ್ಯಗೊಂಡಿದೆ. ಈ ವಾರ ಉತ್ತಮ ಪ್ರದರ್ಶನ ನೀಡಬೇಕಾದರೆ ಇಬ್ಬರು ಭಾರಿ ಶ್ರಮಪಡುವ ಅಗತ್ಯವಿದೆ.
ಮಲೇಶ್ಯ ಮಾಸ್ಟರ್ಸ್‌ನಲ್ಲಿ ತನ್ನ ಬದ್ಧ ಎದುರಾಳಿ, ಚೈನೀಸ್ ತೈಪೆಯ ತೈ ಝು ಯಿಂಗ್‌ವಿರುದ್ಧ 16-21 ಹಾಗೂ 16-21 ಅಂತರದಿಂದ ಸೋತಿದ್ದ ಸಿಂಧು ತನ್ನ ಲಯವನ್ನು ಬೇಗನೆ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಹಾಲಿ ಚಾಂಪಿಯನ್ ಸೈನಾ ಮೂರು ಬಾರಿಯ ವಿಶ್ವ ಚಾಂಪಿಯನ್, ಸ್ಪೇನ್‌ನ ಕರೊಲಿನಾ ಮರಿನ್‌ಗೆ 8-21, 7-21 ಅಂತರದಿಂದ ಹೀನಾಯವಾಗಿ ಸೋತಿದ್ದರು.
ಐದನೇ ಶ್ರೇಯಾಂಕದ ಸಿಂಧು ಜಪಾನ್‌ನ ಅಯಾ ಒಹೊರಿ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಮಲೇಶ್ಯ ಮಾಸ್ಟರ್ಸ್‌ನಲ್ಲಿ 2ನೇ ಸುತ್ತಿನ ಪಂದ್ಯದಲ್ಲಿ ಒಹೊರಿಗೆ ಸಿಂಧು ಸೋಲುಣಿಸಿದ್ದರು. ಸೈನಾ ತನ್ನ ಮೊದಲ ಪಂದ್ಯದಲ್ಲಿ ಜಪಾನ್‌ನ ಇನ್ನೋರ್ವ ಆಟಗಾರ್ತಿ ಸಯಾಕಾ ಟಕಹಶಿ ಅವರನ್ನು ಎದುರಿಸಲಿದ್ದಾರೆ.
ಭಾರತದ ಇಬ್ಬರು ಶಟ್ಲರ್‌ಗಳು ಮೊದಲ ಸುತ್ತಿನಲ್ಲಿ ಸೋಲುವ ಚಾಳಿಯಿಂದ ಹೊರಬರಲು ಎದುರು ನೋಡುತ್ತಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಐದನೇ ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಸಿಂಧು ಅವರು ಸೈನಾ ವಿರುದ್ಧ ಆಡಿರುವ 4 ಪಂದ್ಯಗಳ ಪೈಕಿ ಮೂರು ಬಾರಿ ಸೋತಿದ್ದು, ಸೈನಾ ಹೆಡ್-ಟು-ಹೆಡ್ ದಾಖಲೆಯಲ್ಲಿ 3-1 ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಈ ತನಕ ಆಡಿರುವ ಎಲ್ಲ ನಾಲ್ಕು ಪಂದ್ಯಗಳು ನೇರ ಗೇಮ್‌ಗಳಿಂದ ಕೊನೆಗೊಂಡಿದ್ದವು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸೈನಾ ಮೇಲುಗೈ ಸಾಧಿಸಿದ್ದರೂ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಸಿಂಧುಗೆ ಶರಣಾಗಿದ್ದರು. 2018ರ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಈ ಇಬ್ಬರು ಕೊನೆಯ ಬಾರಿ ಸೆಣಸಾಡಿದ್ದು, ಈ ಪಂದ್ಯವನ್ನು ಸೈನಾ ಗೆದ್ದುಕೊಂಡಿದ್ದರು.
ಮಲೇಶ್ಯ ಮಾಸ್ಟರ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಮುಗ್ಗರಿಸಿದ್ದ ಕಿಡಂಬಿ ಶ್ರೀಕಾಂತ್ ಇಂಡೋನೇಶ್ಯದ ಶೆಸರ್ ಹಿರೆನ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಮಲೇಶ್ಯದಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಿ.ಸಾಯಿ ಪ್ರಣೀತ್ ಚೀನಾದ 8ನೇ ಶ್ರೇಯಾಂಕದ ಶಿ ಯು ಕ್ಯೂ ಅವರನ್ನು ಎದುರಿಸಲಿದ್ದಾರೆ.
ಕಳೆದ ವಾರ ಕ್ರಮವಾಗಿ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾಗೆ ಸೋತಿದ್ದ ಪಾರುಪಲ್ಲಿ ಕಶ್ಯಪ್ ಹಾಗೂ ಎಚ್.ಎಸ್.ಪ್ರಣಯ್ ಮೊದಲ ಸುತ್ತಿನಲ್ಲಿ ಅನುಕ್ರಮವಾಗಿ ಸ್ಥಳೀಯ ಆಟಗಾರರಾದ ಅಂಥೋನಿ ಸಿನಿಸುಕಾ ಜಿಂಟಿಂಗ್ ಹಾಗೂ ಜೊನಾಥನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.
ಕಳೆದ ವಾರ 2ನೇ ಸುತ್ತಿನ ಪಂದ್ಯದಲ್ಲಿ ಮಲೇಶ್ಯದ ಲೀ ಝಿ ಜಿಯಾ ವಿರುದ್ಧ ವೀರೋಚಿತ ಸೋಲುಂಡಿದ್ದ ಸಮೀರ್ ವರ್ಮಾ ಮೊದಲ ಸುತ್ತಿನಲ್ಲಿ ಹಿರಿಯ ಆಟಗಾರ ಟಾಮಿ ಸುಗಿಯಾರ್ಟೊರನ್ನು ಎದುರಿಸಲಿದ್ದಾರೆ.
ಡಬಲ್ಸ್‌ನಲ್ಲಿ ಪುರುಷರ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಇಂಡೋನೇಶ್ಯದ ಮುಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೆಟಿಯಾವಾನ್‌ರನ್ನು ಎದುರಿಸಲಿದ್ದಾರೆ.
ಮಹಿಳಾ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಜಪಾನ್‌ನ ನಾಮಿ ಮಟ್ಸುಯಾಮಾ ಹಾಗೂ ಚಿಹರು ಶಿಡಾರನ್ನು ಎದುರಿಸಿದರೆ, ಮಿಕ್ಸೆಡ್ ಡಬಲ್ಸ್ ನಲ್ಲಿ ಸಾತ್ವಿಕ್ ಹಾಗೂ ಅಶ್ವಿನಿ ಐರ್ಲೆಂಡ್‌ನ ಸ್ಯಾಮ್ ಮ್ಯಾಗೀ ಹಾಗೂ ಚಾಯ್ ಮ್ಯಾಗೀ ಅವರನ್ನು ಎದುರಿಸಲಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ಮೊದಲ ಸುತ್ತಿನಲ್ಲಿ ಕ್ವಾಲಿಫೈ ಆಟಗಾರರನ್ನು ಮುಖಾಮುಖಿಯಾಗಲಿದ್ದಾರೆ.