ಪ್ರತಿಭಟನಾ ಸಮಾವೇಶಕ್ಕೆ ಬರುವವರಿಗೆ ಅಡ್ಡಿಪಡಿಸದಿರಿ: ಪೊಲೀಸರಿಗೆ ಮೊಯ್ದಿನ್ ಬಾವಾ ಮನವಿ

ಮಂಗಳೂರು, ಜ.14: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಡ್ಯಾರು ಕಣ್ಣೂರಿನಲ್ಲಿ ಬುಧವಾರ ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜನರು ಪಕ್ಷ , ಧರ್ಮಾತೀತವಾಗಿ ಭಾಗವಹಿಸಲಿದ್ದಾರೆ. ಜನರ ಸಂಖ್ಯೆ ಹೆಚ್ಚಾಗಬಹುದೆಂಬ ಕಾರಣಕ್ಕೆ ಅವರನ್ನು ದಾರಿ ಮಧ್ಯೆ ತಡೆಯುವ ಕೆಲಸವನ್ನು ಪೊಲೀಸರು ಮಾಡಬಾರದು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜನರಿಗೆ ತೊಂದರೆಯಾಗದಂತೆ ಪೊಲೀಸರು ಕ್ರಮ ವಹಿಸಬೇಕು. ಈ ಸಮಾವೇಶ ಯಾವುದೇ ಧರ್ಮದ ವಿರುದ್ಧ ಅಲ್ಲ. ಸರ್ಕಾರದ ವಿರುದ್ಧವೂ ಅಲ್ಲ. ಇದು ಪೌರತ್ವದ ಹಕ್ಕಿನ ಕುರಿತಾದ ಹೋರಾಟ. ಆದ್ದರಿಂದ ಸರ್ವಧರ್ಮದವರು ಈ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಅಶ್ರಫ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾ್ಯರಿಸ್, ಸುಧಾಕರ್ ಉಪಸ್ಥಿತರಿದ್ದರು.
ರಿಮೋಟ್ ಕಂಟ್ರೋಲ್ ಮೋದಿ, ಅಮಿತ್ ಶಾ ಕೈಯ್ಯಲ್ಲಿ !
ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾರು ಹೆದರಬೇಕಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಕಾಯ್ದೆ ಕುರಿತಂತೆ ರಿಮೋಟ್ ಕಂಟ್ರೋಲ್ ಇರೋದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೈಯಲ್ಲಿ ಎಂದು ಮೊಯ್ದಿನ್ ಬಾವಾ ಹೇಳಿದರು.
ಒಂದು ಸಮುದಾಯವನ್ನು ಉದ್ದೇಶಪೂರ್ವವಾಗಿ ಕಾಯ್ದೆಯಿಂದ ಹೊರಗಿಟ್ಟಿದ್ದಾರೆ. ಹಾಗಾಗಿ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ತ್ರಿವಳಿ ತಲಾಕ್, ಕಾಶ್ಮೀರದಲ್ಲಿ 370 ರದ್ದತಿ, ರಾಮಜನ್ಮಭೂಮಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರ ಬಿದ್ದಾಗ ಕೂಡಾ ಜನರನ್ನು ವಿಚಲಿತರನ್ನಾಗಿಸಲಾಗಲಿಲ್ಲ. ಆದ್ದರಿಂದ ಬುಧವಾರ ನಡೆಯಲಿರುವ ಸಮಾವೇಶಲ್ಲಿಯೂ ಲಕ್ಷಗಟ್ಟಲೆ ಜನ ಭಾಗವಹಿಸ ಲಿದ್ದು, ಶಾಂತಿಯುತವಾಗಿ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ನಡೆಯಲಿದೆ ಎಂದು ಹೇಳಿದರು.







