ಮೇ10 ರಂದು ಕಾಮೆಡ್‌ಕೆ ಪರೀಕ್ಷೆ: ದೇಶದ 158 ನಗರಗಳ 400 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜನೆ

ಬೆಂಗಳೂರು, ಜ.14: ಕಾಮೆಡ್ ಕೆ ಮತ್ತು ಯೂನಿ-ಗೇಜ್ ಪ್ರವೇಶ ಪರೀಕ್ಷೆಗಳು ಮೇ 10ರಂದು ನಡೆಯಲಿವೆ. ಈ ಎರಡೂ ಪರೀಕ್ಷೆಗಳನ್ನು ಒಟ್ಟಾಗಿ ಆಯೋಜಿಸಲಾಗುತ್ತಿದೆ ಎಂದು ಕಾಮೆಡ್‌ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ.ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವೃತ್ತಿಪರ ಕಾಲೇಜು ಫೌಂಡೇಶನ್ ಟ್ರಸ್ಟ್‌ನಿಂದ ಮಾನ್ಯತೆ ಪಡೆದ ಕಾಲೇಜುಗಳ ಬಿಇ, ಬಿಟೆಕ್ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್ ಕೆ ಯುಜಿಇಟಿ ಪರೀಕ್ಷೆ ನಡೆಯುತ್ತಿದ್ದು, ಯೂನಿ-ಗೇಜ್ ಪ್ರವೇಶ ಪರೀಕ್ಷೆಯು ದೇಶಾದ್ಯಂತ ಇರುವ ಪ್ರಮುಖ ಮತ್ತು ಮಾನ್ಯತೆ ಪಡೆದ ಡೀಮ್ಡ್/ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಕೋರ್ಸ್‌ಗಳಿಗೆ ನಡೆಯುತ್ತಿವೆ ಎಂದರು.
ದೇಶಾದ್ಯಂತ 158 ನಗರಗಳಲ್ಲಿನ 400 ಪರೀಕ್ಷಾ ಕೇಂದ್ರಗಳಲ್ಲಿ ಈ ಪ್ರವೇಶ ಪರೀಕ್ಷೆಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಕಾಮೆಡ್‌ಕೆ ಹಾಗೂ ಯೂನಿ-ಗೇಜ್ ಪರೀಕ್ಷೆಗಳು ದೇಶದ 190 ಸಂಸ್ಥೆಗಳು ಮತ್ತು 31 ವಿಶ್ವವಿದ್ಯಾಲಯಗಳ ಒಂದು ಲಕ್ಷಕ್ಕೂ ಅಧಿಕ ಸೀಟುಗಳಿಗೆ ನಡೆಯಲಿವೆ. ಈ ಮೂಲಕ ಭಾರತದಲ್ಲಿ ಬಹು ವಿಶ್ವವಿದ್ಯಾಲಯ ಖಾಸಗಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಇದಾಗಲಿದೆ. ಕರ್ನಾಟಕದಲ್ಲಿನ 24 ನಗರಗಳ 100 ಕೇಂದ್ರಗಳಲ್ಲಿ ಈ ಪ್ರವೇಶ ಪರೀಕ್ಷೆಗಳು ನಡೆಯುತ್ತಿದ್ದು, 30,000 ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇಂಜಿನಿಯರಿಂಗ್ ಶಿಕ್ಷಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ವರ್ಷದಿಂದ ವರ್ಷಕ್ಕೆ ಕರ್ನಾಟಕ ಮತ್ತು ಕರ್ನಾಟಕದ ಹೊರಗೆ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣುತ್ತಿದ್ದೇವೆ. ಕರ್ನಾಟಕವು ಐಟಿ, ಉತ್ಪಾದನೆ ಹಬ್ ಎನಿಸಿದೆ ಮತ್ತು ಇಲ್ಲಿನ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಉದ್ಯಮದ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಪೂರಕವಾದ ಶಿಕ್ಷಣವನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿನ ಅತ್ಯುತ್ತಮ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದು ಅವರು ಹೇಳಿದರು.
ಈ ಪ್ರವೇಶ ಪರೀಕ್ಷೆಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಎ.17 ಕೊನೆ ದಿನವಾಗಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ಗಳಾದ www.comedk.org ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.
ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಗಳೆಲ್ಲವೂ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ನಡೆಯಲಿವೆ. ಈ ಆನ್‌ಲೈನ್ ಪರೀಕ್ಷಾ ವಿಧಾನ ಮತ್ತು ಅರ್ಜಿ ಪ್ರಕ್ರಿಯೆಗಳು ಹಾಗೂ ಮಾರ್ಗಸೂಚಿಗಳು ವೆಬ್‌ಸೈಟ್ www.comedk.org ನಲ್ಲಿ ಲಭ್ಯಇವೆ. 10+2/ಪಿಯುಸಿ ಅಥವಾ ಎಐಸಿಟಿಇನಿಂದ ಮಾನ್ಯತೆ ಪಡೆದ ತತ್ಸಮಾನ ಪರೀಕ್ಷೆಗಳನ್ನು ಉತ್ತೀರ್ಣರಾಗಿರುವ ಅಥವಾ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ಪೈಕಿ ಸಾಮಾನ್ಯ ಅಭ್ಯರ್ಥಿಗಳು ಈ ಪರೀಕ್ಷೆಗಳಲ್ಲಿ ಕನಿಷ್ಟ ಶೇ.45 ಮತ್ತು ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಶೇ.40 ರಷ್ಟು ಅಂಕ ಪಡೆದಿರುವುದು ಕಡ್ಡಾಯವಾಗಿರುತ್ತದೆ.







