ಸಿದ್ದರಾಮೇಶ್ವರರ ಜಯಂತಿಗೆ ಜನಪ್ರತಿನಿಧಿಗಳ ಗೈರು: ಕಾರ್ಯಕ್ರಮ ಬಹಿಷ್ಕರಿಸಲು ಮುಂದಾದ ಭೋವಿ ಜನಾಂಗ

ಮಡಿಕೇರಿ ಜ.14 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಗೆ ಜಿಲ್ಲೆಯ ಜನಪ್ರತಿನಿಧಿಗಳು ಗೈರು ಹಾಜರಾದ ಹಿನ್ನೆಲೆ ಭೋವಿ ಜನಾಂಗದ ಮಂದಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಮುಂದಾದ ಪ್ರಸಂಗ ನಡೆಯಿತು.
ನಗರದ ದೇವರಾಜ ಅರಸು ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಲ್ಲಿರುವಂತೆ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಅವರು ಆಗಮಿಸಬೇಕಾಗಿತ್ತು. ಆದರೆ ಭೋವಿ ಜನಾಂಗದ ಮುಖಂಡರು, ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರೇ ಹೊರತು ಯಾವೊಬ್ಬ ಜನಪ್ರತಿನಿಧಿಯೂ ಇರಲಿಲ್ಲ. ಇದರಿಂದ ಅಸಮಾಧಾನಗೊಂಡ ಭೋವಿ ಜನಾಂಗದ ಪ್ರೇಕ್ಷಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾವು ಕೂಲಿ ಕೆಲಸ ಬಿಟ್ಟು ಕಾರ್ಯಕ್ರಮಕ್ಕೆ ಬಂದಿದ್ದರೂ ಜನಪ್ರತಿನಿಧಿಗಳು ಮಾತ್ರ ಆಗಮಿಸಿಲ್ಲ, ಸಿದ್ದರಾಮೇಶ್ವರರಿಗೆ ಅವಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರಾದರೂ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು.
ಕರ್ನಾಟಕ ಭೋವಿ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಸುಜಿತ್ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ದುರ್ಬಲ ವರ್ಗವನ್ನು ಕಡೆಗಣಿಸಿದ್ದಾರೆ, ಪ್ರಭಾವಿಗಳ ಕಾರ್ಯಕ್ರಮಕ್ಕೆ ಮಾತ್ರ ಕಡ್ಡಾಯವಾಗಿ ಹಾಜರಾಗುತ್ತಾರೆ ಎಂದು ಆರೋಪಿಸಿದರು. ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಆಚರಿಸುವ ಜವಬ್ದಾರಿಯನ್ನು ಭೋವಿ ಜನಾಂಗಕ್ಕೆ ಬಿಟ್ಟುಕೊಡಿ, ಸರ್ಕಾರದ ಹಣ ಬೇಕಿಲ್ಲ, ನಾವೇ ಕೂಲಿ ಮಾಡಿದ ಹಣ ಸೇರಿದ ಕಾರ್ಯಕ್ರಮ ಮಾಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.








