ನರ್ಸ್ ಹತ್ಯೆ: ಟಿವಿ ನೇರ ಪ್ರಸಾರದ ಕಾರ್ಯಕ್ರಮದಲ್ಲೇ ತಪ್ಪೊಪ್ಪಿಕೊಂಡ ಆರೋಪಿ

ಫೋಟೊ : hindustantimes.com
ಹೊಸದಿಲ್ಲಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೋಟೆಲ್ನಲ್ಲಿ ನರ್ಸ್ ಒಬ್ಬರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ ಮಣೀಂದರ್ ಸಿಂಗ್ ಮಂಗಳವಾರ ಸುದ್ದಿ ವಾಹಿನಿಯೊಂದರ ನೇರಪ್ರಸಾರದ ಕಾರ್ಯಕ್ರಮದಲ್ಲಿ ತಪ್ಪೊಪ್ಪಿಕೊಂಡಿರುವ ಘಟನೆ ವರದಿಯಾಗಿದೆ.
ಹತ್ಯೆ ಪ್ರಕರಣವೊಂದರ ಶಿಕ್ಷೆಗೆ ಗುರಿಯಾಗಿ ಮೇಲ್ಮನವಿ ಸಲ್ಲಿಸಿದ ಈತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 2010ರಲ್ಲಿ ಕರ್ನಾಲ್ನಲ್ಲಿ ಮತ್ತೊಂದು ಹತ್ಯೆ ಮಾಡಿದ್ದನ್ನೂ ಈತ ಒಪ್ಪಿಕೊಂಡಿದ್ದಾನೆ. ಹೈಕೋರ್ಟ್ನಲ್ಲಿ ಈತನ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ಪಂಜಾಬಿ ಟಿವಿ ಚಾನಲ್ ಕಾರ್ಯಕ್ರಮದಲ್ಲಿ ಈತ ಪಾಲ್ಗೊಂಡಿದ್ದು, ಗೊತ್ತಾದ ತಕ್ಷಣ ಪೊಲೀಸರು ದಾಳಿ ನಡೆಸಿ 31 ವರ್ಷದ ಆರೋಪಿಯನ್ನು ಬಂಧಿಸಿದರು. ಟಿವಿ ಕಾರ್ಯಕ್ರಮ ಪ್ರಸಾರವಾಗುತ್ತಿರುವ ನಡುವೆಯೇ ಆರೋಪಿಯನ್ನು ಬಂಧಿಸಲಾಯಿತು.
ಜನವರಿ 1ರಂದು ಮಧ್ಯಾಹ್ನ ಕೈಗಾರಿಕಾ ಪ್ರದೇಶ 2ನೇ ಹಂತದ ಹೋಟೆಲ್ ಸ್ಕೈನಲ್ಲಿ 301ನೇ ಕೊಠಡಿಯಲ್ಲಿ ಸರಬ್ಜಿತ್ ಕೌರ್ (27) ಎಂಬ ನರ್ಸ್ ಹತ್ಯೆಗೀಡಾಗಿದ್ದರು, ಕತ್ತು ಸೀಳಿ ಅವರನ್ನು ಕೊಲೆ ಮಾಡಲಾಗಿತ್ತು. ಮಣೀಂದರ್ ಸಿಂಗ್ ಜತೆ ಡಿಸೆಂಬರ್ 30ರಂದು ಆಕೆ ಕೊಠಡಿಗೆ ಬಂದಿದ್ದರು. ಅದೇ ದಿನ ಸಂಜೆ ಮಣೀಂದರ್ ಸಿಂಗ್ ಹೋಟೆಲ್ ಕೊಠಡಿಯಿಂದ ಹೊರಹೋದದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು.







