ಜೈಲು ನಿಯಮಗಳನ್ನು 23 ಬಾರಿ ಉಲ್ಲಂಘಿಸಿದ ನಿರ್ಭಯಾ ಪ್ರಕರಣದ ಅಪರಾಧಿಗಳು

ಹೊಸದಿಲ್ಲಿ. ಜ.15: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಗೆ ದಿನ ಎಣಿಸುತ್ತಿರುವ ಕಳೆದ ಏಳು ವರ್ಷಗಳಲ್ಲಿ ದಿಲ್ಲಿಯ ತಿಹಾರ್ ಜೈಲಿನಲ್ಲಿ ಉಳಿದುಕೊಂಡಿದ್ದಾಗ ಜೈಲು ವೇತನವಾಗಿ ಸುಮಾರು 1,37,000 ರೂ. ಗಳಿಸಿದ್ದಾರೆ ಮತ್ತು ಜೈಲು ನಿಯಮಗಳನ್ನು 23 ಬಾರಿ ಉಲ್ಲಂಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯಲ್ಲಿ 2012 ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಯುವ ವೈದ್ಯಕೀಯ ವಿದ್ಯಾರ್ಥಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಗಳಾದ ಅಕ್ಷಯ್ ಠಾಕೂರ್ ಸಿಂಗ್, ಮುಖೇಶ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ತಪ್ಪಿತಸ್ಥರೆಂದು ಸಾಬೀತಾಗಿದೆ. ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ದಿಲ್ಲಿ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಡೆತ್ ವಾರಂಟ್‌ಗೆ ಸಹಿ ಹಾಕಿತ್ತು.
ಜೈಲಿನಲ್ಲಿದ್ದಾಗ ಜೈಲು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿನಯ್‌ಗೆ 11 ಬಾರಿ ಶಿಕ್ಷೆ ವಿಧಿಸಿದರೆ, ಅಕ್ಷಯ್‌ಗೆ ಒಮ್ಮೆ ಶಿಕ್ಷೆ ವಿಧಿಸಲಾಗಿದೆ. ಮುಖೇಶ್ ಮೂರು ಬಾರಿ ಮತ್ತು ಪವನ್ ಎಂಟು ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದಾನೆ.
ಕಳೆದ ಏಳು ವರ್ಷಗಳಲ್ಲಿ, ಮುಖೇಶ್ ಯಾವುದೇ ಕಾರ್ಮಿಕ ಕೆಲಸಗಳನ್ನು ಮಾಡದಿರಲು ನಿರ್ಧರಿಸಿದ್ದನು. ಅಕ್ಷಯ್ ಜೈಲು ವೇತನವಾಗಿ 69,000 ರೂ, ಪವನ್ 29,000 ರೂ. ಮತ್ತು ವಿನಯ್ 39,000 ರೂ. ಗಳಿಸಿದರು ಎಂದು ಮೂಲಗಳು ತಿಳಿಸಿವೆ.
2016 ರಲ್ಲಿ ಮುಖೇಶ್, ಪವನ್ ಮತ್ತು ಅಕ್ಷಯ್ 10 ನೇ ತರಗತಿಗೆ ಪ್ರವೇಶ ಪಡೆದು ಪರೀಕ್ಷೆಗಳಿಗೆ ಹಾಜರಾದರೂ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ವಿನಯ್, 2015 ರಲ್ಲಿ, ಪದವಿ ತರಗತಿಗೆ ಪ್ರವೇಶ ಪಡೆದರೂ ಅದನ್ನು ಪೂರ್ಣಗೊಳಿಸಲು ಅವನಿಗೆ ಸಾಧ್ಯವಾಗಲಿಲ್ಲ.
ಎಲ್ಲಾ ಅಪರಾಧಿಗಳಿಗೂ ಗಲ್ಲಿಗೇರುವ ಮೊದಲು ಎರಡು ಬಾರಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ. ಗರಿಷ್ಠ ಶಿಕ್ಷೆಯನ್ನು ಪಡೆದ ಅಪರಾಧಿ ವಿನಯ್, ಅತ್ಯಂತ ಆತಂಕಕಾರಿ ಎಂದು ನಂಬಲಾಗಿದೆ.
ದಿಲ್ಲಿಯಲ್ಲಿ 2012ರಲ್ಲಿ ಯುವ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರನ್ನು ಗಲ್ಲಿಗೇರಿಸುವ ವ್ಯವಸ್ಥೆ ಕಳೆದ ತಿಂಗಳು ಪ್ರಾರಂಭವಾಯಿತು. ಮರಣದಂಡನೆಗೆ ಸಿದ್ಧತೆಗಾಗಿ ರವಿವಾರ ತಿಹಾರ್ ಜೈಲಿನಲ್ಲಿ "ಡಮ್ಮಿ ಮರಣದಂಡನೆ" ನಡೆಸಲಾಯಿತು.
ನಾಲ್ವರು ಅಪರಾಧಿಗಳ ಮರಣದಂಡನೆ ಶಿಕ್ಷೆಯ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಿರಸ್ಕರಿಸಿದೆ.







