'ಫಾರ್ಮಾ ಕಂಪೆನಿಗಳು ವೈದ್ಯರಿಗೆ ಲಂಚ ನೀಡುತ್ತಿವೆ ಎಂಬ ಹೇಳಿಕೆ ಸಾಬೀತು ಪಡಿಸಿ ಇಲ್ಲವೇ ಕ್ಷಮೆ ಯಾಚಿಸಿ'
ಪ್ರಧಾನಿಯನ್ನು ಆಗ್ರಹಿಸಿದ ಐಎಂಎ

ಹೊಸದಿಲ್ಲಿ: ಫಾರ್ಮಾ ಕಂಪೆನಿಗಳು ವೈದ್ಯರನ್ನು ಓಲೈಸಲು ಅವರಿಗೆ ಹೆಣ್ಣು, ಗ್ಯಾಜೆಟ್‍ಗಳು ಅಥವಾ ವಿದೇಶ ಪ್ರವಾಸಗಳ ಆಮಿಷವೊಡ್ಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆನ್ನಲಾದ ಹೇಳಿಕೆಯನ್ನು ಅವರು ಒಂದೋ ಸಾಬೀತು ಪಡಿಸಬೇಕು ಇಲ್ಲವೇ ಕ್ಷಮೆಯಾಚಿಸಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹೇಳಿದೆ.
ಪ್ರಧಾನಿ ಮೋದಿ ಜನವರಿ 2ರಂದು ದೇಶದ ಖ್ಯಾತ ಫಾರ್ಮಾ ಕಂಪೆನಿಗಳಾದ ಝೈಡಸ್ ಕ್ಯಾಡಿಲಾ, ಟಾರೆಂಟ್ ಫಾರ್ಮಾಸ್ಯೂಟಿಕಲ್ಸ್ ಹಾಗೂ ವೊಕ್‍ಹಾರ್ಡ್‍ಟ್ ಕಂಪೆನಿಗಳ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದರು. ವೈದ್ಯರು ತಮ್ಮ ಕಂಪೆನಿಯ ಔಷಧಿಗಳನ್ನೇ ರೋಗಿಗಳಿಗೆ ನೀಡುವಂತಾಗಲು ಮೆಡಿಕಲ್ ರೆಪ್ರೆಸೆಂಟೇಟಿವ್‍ಗಳು ಅನೈತಿಕ ಮಾರ್ಕೆಟಿಂಗ್ ತಂತ್ರಗಳನ್ನು ಅನುಸರಿಸುತ್ತಿದ್ದಾರೆಂದು ಎನ್‍ಜಿಒ ಸಪೋರ್ಟ್ ಫಾರ್ ಅಡೊಕ್ವೆಸಿ ಎಂಡ್ ಟ್ರೇನಿಂಗ್ ಟು ಹೆಲ್ತ್ ತನ್ನ ವರದಿಯಲ್ಲಿ ಹೇಳಿದ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.
"ಉನ್ನತ ಫಾರ್ಮಾ ಕಂಪೆನಿಗಳು ಲಂಚದ ರೂಪದಲ್ಲಿ ವೈದ್ಯರಿಗೆ ಮಹಿಳಾ ಎಸ್ಕಾರ್ಟ್ಸ್ ಗಳನ್ನು ಪೂರೈಸುತ್ತಿವೆ ಎಂದು ಪ್ರಧಾನಿ ಆ ಸಭೆಯಲ್ಲಿ ಹೇಳಿದ್ದಾರೆನ್ನಲಾದ ವರದಿಗಳು ಮಾಧ್ಯಮದಲ್ಲಿ ಬಂದಿವೆ,'' ಎಂದು ಹೇಳಿದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಪ್ರಧಾನಿ ಕಾರ್ಯಾಲಯ ಈ ವರದಿಯನ್ನು ನಿರಾಕರಿಸಿಲ್ಲ ಎಂದಿದೆ. "ಪ್ರಧಾನಿ ನಿಜವಾಗಿಯೂ ಇಂತಹ ಹೇಳಿಕೆ ನೀಡಿದ್ದರೆ ಅದಕ್ಕೆ ಐಎಂಎ ತನ್ನ ತೀವ್ರ ಆಕ್ಷೇಪ ಸೂಚಿಸುತ್ತದೆ,'' ಎಂದು ಅಸೋಸಿಯೇಶನ್ ಹೇಳಿದೆ.
"'ವೈದ್ಯರಿಗೆ ಮಹಿಳಾ ಎಸ್ಕಾರ್ಟ್ಸ್ ಗಳನ್ನು ಪೂರೈಕೆ' ಮಾಡಿರುವ ಕುರಿತು ಮಾಹಿತಿಯಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬದಲು ಕಂಪೆನಿಗಳ ಅಧಿಕಾರಿಗಳ ಸಭೆಯನ್ನು ಕರೆಯುವ ಅವಶ್ಯಕತೆಯೇನಿತ್ತು ಎಂದು ಐಎಂಎ ಪ್ರಶ್ನಿಸಿದೆಯಲ್ಲದೆ, ಆಧಾರರಹಿತ ಮಾಹಿತಿಯನ್ನು ಅವಲಂಬಿಸಿ ಪ್ರಧಾನಿ ಹೇಳಿಕೆ ನೀಡಿದ್ದೇ ಆದಲ್ಲಿ ಅವರು ದೇಶದ ವೈದ್ಯರುಗಳಿಂದ ಕ್ಷಮೆ ಕೇಳುವುದು ಸೂಕ್ತ ಎಂದೂ ಅಸೋಸಿಯೇಶನ್ ಹೇಳಿದೆ.
“Ayushman Bharat is a non-starter... allotment for health by Govt has hovered around 1-1.3%.. no new investment in infrastructure or Human resources..violence against doctors and hospitals on the rise..even ambulances not safe” Scathing Letter By IMA. pic.twitter.com/MnJab6X7yW
— Dushyant (@atti_cus) January 15, 2020







