ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ರಿಗೆ ಜಾಮೀನು

ಹೊಸದಿಲ್ಲಿ, ಜ.15: ಜಾಮಾ ಮಸ್ಜಿದ್ ಬಳಿ ಡಿಸೆಂಬರ್ 20 ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ವೇಳೆ ಜನರನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರಿಗೆ ದಿಲ್ಲಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಾಮಿನಿ ಲಾವು ಷರತ್ತುಬದ್ಧ ಜಾಮೀನು ನೀಡಿದರು. ಆಝಾದ್ ಅವರಿಗೆ ನಾಲ್ಕು ವಾರಗಳವರೆಗೆ ದಿಲ್ಲಿಗೆ ಭೇಟಿ ನೀಡದಂತೆ ಮತ್ತು ಒಂದು ತಿಂಗಳವರೆಗೆ (ಫೆಬ್ರವರಿ 16 ರವರೆಗೆ) ಯಾವುದೇ 'ಧರಣಿ' ನಡೆಸದಂತೆ ನಿರ್ಬಂಧಿಸಲಾಗಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಾಮಿನಿ ಲಾವು ಆಝಾದ್ ಅವರಿಗೆ ಜಾಮೀನಿಗೆ 25 ಸಾವಿರ ರೂ. ಬಾಂಡ್ ನೀಡುವಂತೆ ಆದೇಶ ನೀಡಿದರು.
ಆಝಾದ್ ಅವರನ್ನು ಉತ್ತರ ಪ್ರದೇಶದ ಸಹರಾನ್ಪುರಕ್ಕೆ ಕರೆದೊಯ್ಯಲಾಗುತ್ತದೆ. ಆದರೆ, ನ್ಯಾಯಾಲಯವು 24 ಗಂಟೆಗಳ ಒಳಗೆ ಜಾಮಾ ಮಸೀದಿಗೆ ಪೊಲೀಸ್ ಬೆಂಗಾವಲಿನೊಂದಿಗೆ ಭೇಟಿ ನೀಡಲು ಅವಕಾಶ ನೀಡಿತು.
ತೀರ್ಪಿನ ಘೋಷಣೆಯ ಸಮಯದಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಯುಪಿಯಲ್ಲಿ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಜಾದ್ ಪರ ಹಾಜರಾದ ವಕೀಲರು ಹೇಳಿದರು.
ಭೀಮ್ ಆರ್ಮಿಯು ಡಿಸೆಂಬರ್ 20 ರಂದು ಸಿಎಎ ವಿರುದ್ಧ ಪೊಲೀಸ್ ಅನುಮತಿಯಿಲ್ಲದೆ ಜಮಾ ಮಸೀದಿಯಿಂದ ಜಂತರ್ ಮಂತರ್‌ಗೆ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿತ್ತು. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರ 15 ಮಂದಿಗೆ ಜನವರಿ 9 ರಂದು ಜಾಮೀನು ನೀಡಲಾಗಿತ್ತು.







