ಉಡುಪಿ: ಹಗಲು ತೇರಿನೊಂದಿಗೆ ಸಂಪನ್ನಗೊಂಡ ಸಪ್ತೋತ್ಸವ

ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ರೋತ್ಸವ ಎಂದೇ ಕರೆಯಲಾಗುವ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಳೆದೊಂದು ವಾರದಿಂದ ನಡೆದ ಸಪ್ತೋತ್ಸವ, ಇಂದು ಹಗಲಿನ ರಥೋತ್ಸವ ‘ಚೂರ್ಣೋತ್ಸವ’ದೊಂದಿಗೆ ಸಂಪನ್ನಗೊಂಡಿತು.
ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 8000 ವರ್ಷಗಳ ಹಿಂದೆ ಮಕರ ಸಂಕ್ರಮಣದ ದಿನದಂದೇ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇಲ್ಲಿ ಒಂದು ವಾರ ಕಾಲ ಸಪ್ತೋತ್ಸವವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ (ಜ.14) ದಿನದಂದು ರಾತ್ರಿ ಮೂರು ತೇರುಗಳ ಉತ್ಸವ ನಡೆದು ಮರುದಿನ ಹಗಲು ರಥೋತ್ಸವದೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ.
ಪರ್ಯಾಯ ಪಲಿಮಾರು ಮಠದ ಹಿರಿಯ ಹಾಗೂ ಕಿರಿಯ ಯತಿ ಗಳಲ್ಲದೇ, ಇದೇ ಜ.18ರಂದು ಶ್ರೀವಿದ್ಯಾಧೀಶರಿಂದ ಮುಂದಿನ ಎರಡು ವರ್ಷಗಳಿಗೆ ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ಪಡೆಯಲಿರುವ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥರು ಹಾಗೂ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು ಇಂದಿನ ಚೂರ್ಣೋತ್ಸವದಲ್ಲಿ ಪಾಲ್ಗೊಂಡರು.
ಪೂಜೆಯ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ದೇವರನ್ನು ಚಿನ್ನದ ಪಾಲಕ್ಕಿಯಲ್ಲಿ ತಂದು ಸ್ವಾಗತ ಗೋಪುರದ ಎದುರು ನಿಲ್ಲಿಸಲಾದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಎಲ್ಲಾ ಸ್ವಾಮೀಜಿಗಳು ರಥವನ್ನೇರಿ ಮಂಗಳಾರತಿ ಬೆಳಗಿದ ಬಳಿಕ ರಥವನ್ನು ರಥಬೀದಿಗೆ ಒಂದು ಸುತ್ತ ಪ್ರದಕ್ಷಿಣೆ ತರಲಾಯಿತು.
ಉತ್ಸವದ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಮಠಕ್ಕೆ ತಂದು ಪೂಜಿಸಿ ದೇವರಿಗೆ ಸಮರ್ಪಿತ ಓಕುಳಿಯನ್ನು ಎಲ್ಲಾ ಯತಿಗಳೊಂದಿಗೆ ಭಕ್ತರು ಹಚ್ಚಿಕೊಂಡು ಮಧ್ವ ಸರೋವರದಲ್ಲಿ ಅವಭೃತ ಸ್ನಾನ ಮಾಡಿದರು. ನೂರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಂಡರು. ಬಳಿಕ ಅನ್ನಸಂತಪರ್ಣೆಗಾಗಿ ಸಿದ್ಧಪಡಿಸಲಾದ ಅನ್ನದ ರಾಶಿಗೆ ಪಲ್ಲಪೂಜೆ ನಡೆಯಿತು. ಸಾವಿರಾರು ಮಂದಿ ಇಂದಿನ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಮಕರ ಸಂಕ್ರಮಣದ ದಿನವಾದ ಮಂಗಳವಾರ ರಾತ್ರಿ ರಥಬೀದಿಯಲ್ಲಿ ಮೂರು ತೇರು ಉತ್ಸವ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ತರಲಾದ ಶ್ರೀಕೃಷ್ಣ ಮುಖ್ಯಪ್ರಾಣ ಮೂರ್ತಿಗಳನ್ನು ರಥಗಳಲ್ಲಿ ಇರಿಸಲಾಯಿತು. ಚಿಕ್ಕ ರಥದಲ್ಲಿ ಮುಖ್ಯಪ್ರಾಣ, ಮಧ್ಯ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರವೌಳೀಶ್ವರ ಹಾಗೂ ಬ್ರಹ್ಮರಥದಲ್ಲಿ ಕೃಷ್ಣನನ್ನು ಕುಳ್ಳಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು. ಈ ಮೂರು ರಥಗಳು ಪುತ್ತಿಗೆ ಮಠದ ಎದುರು ಒಂದು ಕಡೆಗೆ ಒಂದು ಸರಳರೇಖೆಯಲ್ಲಿ ನಿಲ್ಲುವ ಗಳಿಗೆ ಇಡೀ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂದರ್ಭದಲ್ಲಿ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನವೂ ನಡೆಯಿತು.













