ಫಾಸ್ಟಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ ಆರೋಪ: ಚಾಲಕರು-ಟೋಲ್ ಸಿಬ್ಬಂದಿ ನಡುವೆ ಗಲಾಟೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.15: ಫಾಸ್ಟಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಕ್ಕೆ ಖಾಸಗಿ ಬಸ್ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ನೆಲಮಂಗಲ ನವಯುಗ ಟೋಲ್ ಬಳಿ ಗಲಾಟೆ ನಡೆದಿದೆ.
ನವಯುಗ ಟೋಲ್ ಬಳಿ ಫಾಸ್ಟಾಗ್ ಇಲ್ಲದ ಚಾಲಕರಿಂದ ಟೋಲ್ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯಲು ಮುಂದಾಗುತ್ತಿದ್ದಂತೆಯೇ ಗಲಾಟೆ ಪ್ರಾರಂಭವಾಯಿತು ಎನ್ನಲಾಗಿದೆ. ಇದರಿಂದ, ಫ್ಯಾಸ್ಟಾಗ್ ಪಡೆದವರೂ ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಬೇಕಾಯಿತು.
ಖಾಸಗಿ ಬಸ್ಗೆ ಎರಡು ಕಡೆಗೆ 130 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ. ಫಾಸ್ಟಾಗ್ ಇಲ್ಲದಿದ್ದರೆ 230 ರೂ.ಕಟ್ಟಬೇಕು. ಆದರೆ, 230 ರೂ.ಹೆಚ್ಚಿನ ಹಣ ಕಟ್ಟಲು ರಸೀದಿ ಕೊಟ್ಟಾಗ ಟೋಲ್ ಸಿಬ್ಬಂದಿ ಜತೆಗೆ ಫಾಸ್ಟಾಗ್ ಇಲ್ಲದ ವಾಹನ ಸವಾರರು ಜಗಳ ಮಾಡಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಸರಕಾರದ ಆದೇಶದ ಪ್ರಕಾರ ಡಿ.1ರ ಬಳಿಕ ಫಾಸ್ಟಾಗ್ ಇಲ್ಲದ ವಾಹನಗಳು ದುಪ್ಪಟ್ಟು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಫಾಸ್ಟಾಗ್ ಅನ್ನು ದ್ವಿಚಕ್ರ ಮತ್ತು ತಿಚಕ್ರ ವಾಹನಗಳನ್ನು ಹೊರತುಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಳಿಗೂ ಇದು ಕಡ್ಡಾಯವಾಗಿರುತ್ತದೆ.





