‘ಸಮುದಾಯೋತ್ಸವ-2020’ ಪ್ರಶಸ್ತಿಗೆ ಐವರು ಸಾಧಕರ ಆಯ್ಕೆ

ಉಡುಪಿ, ಜ.15: ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಜ.19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ನಡೆಯಲಿರುವ ಉಡುಪಿ ಧರ್ಮಪ್ರಾಂತ ಮಟ್ಟದ ಸಮುದಾಯೋತ್ಸವ- 2020 ಸಮ್ಮೇಳನದಲ್ಲಿ ಓರ್ವರಿಗೆ ಜೀವಮಾನ ಸಾಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಐವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಜೀವಮಾನ ಸಾಧನೆಗಾಗಿ ಸಹಕಾರಿ ಧುರೀಣ ಜಾನ್ ಡಿಸಿಲ್ವಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಾಗಿ ಪತ್ರಕರ್ತ ಜಾನ್ ಡಿಸೋಜ, ಕುಂದಾಪುರ (ಸಮೂಹ ಮಾಧ್ಯಮ), ಪ್ರಗತಿಪರ ಕೃಷಿಕ ಜೂಲಿಯನ್ ದಾಂತಿ(ಭತ್ತದ ಕೃಷಿ), ರೋಶನ್ ಡಿಸೋಜ ಬೆಳ್ಮಣ್(ಸಮಾಜ ಸೇವೆ), ನಾಟಿವೈದ್ಯ ಜೆರೋಮ್ ಫ್ರಾನ್ಸಿಸ್ ಅಂದ್ರಾದೆ ಕಲ್ಮಾಡಿ(ಮನೆ ಮದ್ದು) ಅವರನ್ನು ಸಮುದಾಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಇವರ ಸಂಚಾಲಕತ್ವದಲ್ಲಿ 6 ಮಂದಿ ಸದಸ್ಯರ ಆಯ್ಕೆ ಸಮಿತಿಯ ಮೂಲಕ ಆಯ್ಕೆ ನಡೆದಿದ್ದು ಧರ್ಮಪ್ರಾಂತದ ಎಲ್ಲಾ 52 ಚರ್ಚುಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಜ.19ರಂದು ಮಧ್ಯಾಹ್ನ 2:30ಕ್ಕೆ ನಡೆಯುವ ಸಮುದಾಯೋತ್ಸವ -2020 ಇದರ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಉಡುಪಿ ಮೂಲದವರಾಗಿದ್ದು, ಕಳೆದ 2 ವರ್ಷಗಳಿಂದ ಹೊರ ದೇಶ, ರಾಜ್ಯಗಳಲ್ಲಿ ಸಾಧನೆ ಮಾಡಿದವರಿಗೆ, ಸಹಕಾರಿ ಸಂಘ ಹಾಗೂ ಎ.ಪಿ.ಎಂ.ಸಿಗಳಲ್ಲಿ ನಿರ್ದೇಶಕರಾಗಿದ್ದವರಿಗೆ, ಗಜೆಟೆಡ್ ಮತ್ತು ಅದಕ್ಕಿಂತ ಉನ್ನತ ಹಂತದ ಅಧಿಕಾರಿಗಳಿಗೆ ಹಾಗೂ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಕ್ರೈಸ್ತ ನಾಯಕರನ್ನು ಸಹ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.







