ಮಲ್ಪೆ, ಅದಮಾರು, ಮಟ್ಟುವಿನಿಂದ ಹೊರೆಕಾಣಿಕೆ ಸಮರ್ಪಣೆ

ಉಡುಪಿ, ಜ.15: ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಅಂಗವಾಗಿ ಮಲ್ಪೆ ಮೀನುಗಾರರ ಸಂಘ, ಮಟ್ಟುಗುಳ್ಳ ಬೆಳೆಗಾರರ ಸಂಘ ಹಾಗೂ ಮಣಿಪುರ ಮತ್ತು ಅದಮಾರು ವಲಯದಿಂದ ಹೊರೆಕಾಣಿಕೆ ಸಮರ್ಪಣೆ ಬುಧವಾರ ನಡೆಯಿತು.
ಮಲ್ಪೆ ಮೀನುಗಾರರ ಸಂಘ, ವಿವಿಧ ಭಜನಾ ಮಂದಿರ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಹೊರೆ ಕಾಣಿಕೆ ಮೆರವಣಿಗೆಗೆ ಮಲ್ಪೆ ಬಂದರಿನಲ್ಲಿ ಚಾಲನೆ ನೀಡಿ, ಮಾತನಾಡಿದ ಅದಮಾರು ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಮೀನುಗಾರರು ಶ್ರಮಿಕರು ಹಾಗೂ ಛಲಗಾರರು. ಮಲ್ಪೆ ಹಾಗೂ ಶ್ರೀಕೃಷ್ಣನಿಗೆ ಅನೋನ್ಯ ಸಂಬಂಧವಿದೆ. ಮೀನುಗಾರರು ಕೂಡಾ ಶ್ರೀಕೃಷ್ಣನ ಸೇವೆಗೆ ಸದಾ ಕಾರ್ಯಪ್ರವೃತ್ತರಾಗುತ್ತಾರೆ ಎಂದರು.
ಸಂಪತ್ತು ಕೂಡಿಡುವ ಬದಲು ಬಡವರು, ಸಂಕಷ್ಟದಲ್ಲಿರುವವರು ಹಾಗೂ ಸಾಮಾಜಿಕ ಮುಖಿ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಆಗ ಮನಸ್ಸಿ ನೊಳಗಿನ ಭಗವಂತನಿಗೆ ಅರ್ಪಣೆ ಮಾಡಿದಂತಾಗುತ್ತದೆ. ಸಮಾಜದ ಸಂಪತ್ತಿನ ಕೊರತೆ, ಒಳ್ಳೆಯ ಸಂಪತ್ತು ವೃದ್ಧಿಯಾಗುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಬಳಿಕ ಮಲ್ಪೆಯಿಂದ ಆಗಮಿಸಿದ ಮಲ್ಪೆ ಮೀನುಗಾರರ ಸಂಘ, ಮಟ್ಟುವಿ ನಿಂದ ಆಗಮಿಸಿದ ಮಟ್ಟುಗುಳ್ಳು ಬೆಳೆಗಾರರ ಸಂಘ ಮತ್ತು ಮಣಿಪುರ, ಅದಮಾರಿನಿಂದ ಆಗಮಿಸಿದ ಭಕ್ತವೃಂದದ ಹೊರೆಕಾಣಿಕೆ ನಗರದ ಜೋಡು ಕಟ್ಟೆಯಲ್ಲಿ ಜೊತೆಯಾಯಿತು. ಅಲ್ಲಿಂದ ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ಮೆರವಣಿಗೆ ಸಾಗಿ ಬಂತು. ಬಳಿಕ ಮಠದ ಪಾರ್ಕಿಂಗ್ ಏರಿಯಾದಲ್ಲಿರುವ ಉಗ್ರಾಣದಲ್ಲಿ ಹೊರೆಕಾಣಿಕೆ ಸಮರ್ಪಿಸಲಾಯಿತು.
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ 10 ಟನ್ ಅಕ್ಕಿ, 3 ಟನ್ ಬೆಲ್ಲ, 10 ಸಾವಿರ ತೆಂಗಿನಕಾಯಿ, 1000 ಲೀಟರ್ ತೆಂಗಿನ ಎಣ್ಣೆ, ಅದಮಾರು ವಲಯದಿಂದ 10ಟನ್ ಅಕ್ಕಿಯನ್ನು ಸಮರ್ಪಿಸಲಾಯಿತು. ಉಗ್ರಾಣದಲ್ಲಿ ಅದಮಾರು ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಶ್ರೀಈಶಪ್ರಿಯ ತೀಥರ್ ಸ್ವಾಮೀಜಿ ಆಶೀರ್ವಚನ ನೀಡಿದರು.
ಹೊರೆಕಾಣಿಕೆ ಮೆರವಣಿಗೆಯಲ್ಲಿ ಶಾಸಕ ಕೆ.ರಘುಪತಿ ಭಟ್, ಡಾ.ಜಿ. ಶಂಕರ್, ಹೊರೆಕಾಣಿಕೆ ಉಸ್ತುವಾರಿ ಯಶ್ಪಾಲ್ ಎ.ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್.ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ವಿ.ಬಂಗೇರ ಉಪಸ್ಥಿತರಿದ್ದರು.









